ಕಾರವಾರ : ದೀಪಾವಳಿ ಹಬ್ಬಕ್ಕೆ ಇನ್ನೇನು ಒಂದೇ ವಾರ ಬಾಕಿ ಉಳಿದಿದೆ. ಹಬ್ಬದ ಸಲುವಾಗಿ ಕುಮಟಾ ಪಟ್ಟಣದಲ್ಲಿ ಮಾರಾಟಕ್ಕಿಟ್ಟಿರುವ ವಿವಿಧ ನಮೂನೆಯ ಬಣ್ಣ ಬಣ್ಣದ ಮಣ್ಣಿನ ಹಣತೆಗಳು ಹಾಗೂ ದೀಪದ ಗೊಂಬೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಪಟಾಕಿ ನಿಷೇಧ ಬೆನ್ನಲ್ಲೇ ಮಣ್ಣಿನ ಹಣತೆಗೆ ಹೆಚ್ಚಿದ ಬೇಡಿಕೆ.. ಹಿಂದೂಗಳ ಪಾಲಿನ ದೊಡ್ಡ ಹಬ್ಬವನ್ನು ದೀಪದ ಮೂಲಕ ಪ್ರತಿ ವರ್ಷವು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿ ಮನೆ ಮನೆಗಳ ಮುಂದೆ ದೀಪ ಬೆಳಗಲಾಗುತ್ತದೆ. ಅದರಂತೆ ಕುಮಟಾ ಪಟ್ಟಣದಲ್ಲಿ ವಾರದ ಮುಂಚೆಯೇ ದೀಪಗಳು ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರ ಗಮನ ಸೆಳೆಯುತ್ತಿವೆ.
ಮಣ್ಣಿನಲ್ಲಿ ತಯಾರಿಸಿದ ಈ ಹಣತೆಗಳು ಹೆಚ್ಚು ಆಕರ್ಷಕ ಎಂಬುದು ಮಾರಾಟ ಮಾಡುವ ವ್ಯಾಪಾರಿಗಳು ಹೇಳುವ ಮಾತು. ಬಟ್ಟಲು ಹಣತೆ, ಆನೆ ಹಣತೆ, ಕುದುರೆ ಹಣತೆ, ವೃಂದಾವನ ಹಣತೆ, ತೂಗುದೀಪ ಹಣತೆ ಸೇರಿ ವಿವಿಧ ನೂರಾರು ಬಗೆಯ ಹಣತೆಗಳ ಮಾರಾಟ ನಡೆಯುತ್ತಿದೆ.
ದೊಡ್ಡ ಹಣತೆಗೆ 12ಕ್ಕೆ 80 ರಿಂದ 100 ರೂ., ಸಣ್ಣ ಹಣತೆಗೆ 12ಕ್ಕೆ 40 ರಿಂದ 50 ರೂಪಾಯಿ ದರದಲ್ಲಿ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ಪಟಾಕಿಯನ್ನು ರಾಜ್ಯ ಸರ್ಕಾರ ನಿಷೇಧ ಮಾಡಿದ ಹಿನ್ನೆಲೆ ಹಣತೆಗೆ ಹೆಚ್ಚು ಬೇಡಿಕೆ ಬರುವ ನಿರೀಕ್ಷೆ ಇದೆ.
ಆದರೆ, ಕೊರೊನಾ ಕಾರಣದಿಂದ ಗ್ರಾಹಕರು ಮಾರುಕಟ್ಟೆಗೆ ಪ್ರತಿ ವರ್ಷದಂತೆ ಹಬ್ಬದ ತಯಾರಿಗೆ ಮುಂದಾಗಿಲ್ಲ. ಹಿಂದಿನ ವರ್ಷ ಸಾಕಷ್ಟು ಹಣತೆಗಳು ಮಾರಾಟವಾಗಿತ್ತು. ಇದೀಗ ಎರಡು ದಿನದಿಂದ ವ್ಯಾಪಾರ ನಡೆಸುತ್ತಿದ್ದು, ಸ್ವಲ್ಪಮಟ್ಟಿನ ವ್ಯಾಪಾರವಾಗುತ್ತಿದೆ ಎಂಬುದು ಹಣತೆ ವ್ಯಾಪಾರಿಗಳ ಅಭಿಪ್ರಾಯವಾಗಿದೆ.