ಭಟ್ಕಳ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಕೆಲ ದಿನಗಳಿಂದ ತಿರುಗಾಡುತ್ತಿದ್ದನ್ನು ಗಮನಿಸಿದ ಭಟ್ಕಳ ಶಹರ ಠಾಣಾ ಪೊಲೀಸ್ ಸಿಬ್ಬಂದಿ ಬುಧವಾರದಂದು ಬೆಳಿಗ್ಗೆ ಆತನನ್ನು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಉಪಚರಿಸಿ ಬೈಂದುರಿನಲ್ಲಿನ ನಿರಾಶ್ರಿತರ ಕೇಂದ್ರ ಕಳುಹಿಸಿಕೊಟ್ಟಿರುವ ಘಟನೆ ಈಗ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
ಮಾನಸಿಕ ಅಸ್ವಸ್ಥನಿಗೆ ಆಶ್ರಯ: ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ! - bhatkala police
ತುಮಕೂರು ಮೂಲದ ಮಾನಸಿಕ ಅಸ್ವಸ್ಥನಿಗೆ ಭಟ್ಕಳದ ಪೊಲೀಸರು ಉಪಚರಿಸಿ ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿದ್ದಾರೆ.
ಭಟ್ಕಳ ಶಹರ ಠಾಣೆಯಲ್ಲಿ ವಿಜಯಪುರ ಮೂಲದ ಮಾಳಪ್ಪ ಪೂಜಾರಿ ಎಂಬುವರು ಸ್ಪೆಷಲ್ ಬ್ರಾಂಚ್ ಪೊಲೀಸ್ ಸಿಬ್ಬಂದಿಯಾಗಿ ಕಳೆದ 4 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲ ದಿನಗಳಿಂದ ಭಟ್ಕಳ ಸಂಶುದ್ದೀನ್ ಸರ್ಕಲ್ನ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮಲಗಿಕೊಂಡಿರುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿ ಮಾಳಪ್ಪ ಪೂಜಾರಿ ಗಮನಿಸಿದ್ದು, ಬುಧವಾರದಂದು ತಮ್ಮ ಇಲಾಖೆಯ ಕೆಲಸದ ಮಧ್ಯೆಯೇ ಅಸ್ವಸ್ಥ ವ್ಯಕ್ತಿಯನ್ನು ಖಾಸಗಿ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿ ಊಟೋಪಚಾರವನ್ನು ಮಾಡಿಸಿದ್ದಾರೆ. ನಂತರ ಮಾನಸಿಕ ಅಸ್ವಸ್ಥ ವ್ಯಕ್ತಿಯ ಬಳಿ ಆತನ ಹಿನ್ನೆಲೆಯ ಬಗ್ಗೆ ವಿಚಾರಿಸಿದ್ದು, ವ್ಯಕ್ತಿ ತುಮಕೂರು ಮೂಲದ ಶಿವರಾಜ್ ಎಂದು ತಿಳಿದು ಬಂದಿದೆ.
ನಂತರ ಪೊಲೀಸ್ ಸಿಬ್ಬಂದಿ ಮಾಳಪ್ಪ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಬಟ್ಟೆ ನೀಡಿ, ಬೈಂದೂರಿನಲ್ಲಿ ಠಾಣೆಯಲ್ಲಿನ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯನ್ನು ಸಂಪರ್ಕಿಸಿ ನಿರಾಶ್ರಿತರ ಕೇಂದ್ರದ ಬಗ್ಗೆ ಮಾಹಿತಿ ಪಡೆದುಕೊಂಡು ಭಟ್ಕಳದಿಂದ ರೈಲಿನ ಮೂಲಕ ಬೈಂದೂರಿಗೆ ಕಳುಹಿಸಿದ್ದಾರೆ. ಬೈಂದೂರು ರೈಲು ನಿಲ್ದಾಣದಲ್ಲಿದ್ದ ಬೈಂದೂರು ಠಾಣೆಯ ಪೊಲೀಸ್ ಸಿಬ್ಬಂದಿಯು ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಬೈಂದೂರಿನ ನಿರಾಶ್ರಿತ ಕೇಂದ್ರಕ್ಕೆ ದಾಖಲಿಸಿದ್ದಾರೆ. ಒಟ್ಟಿನಲ್ಲಿ ತಮ್ಮ ಕೆಲಸ ಆಯಿತು ತಾವಾಯಿತು ಎನ್ನುವವರ ಮಧ್ಯೆ ಪೊಲೀಸ್ ಸಿಬ್ಬಂದಿ ಮಾಳಪ್ಪ ಪೂಜಾರಿ ಅವರ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.