ಕರ್ನಾಟಕ

karnataka

ETV Bharat / state

ಕರಾವಳಿಯಲ್ಲಿ ಮುಂದುವರಿದ ಮಳೆಯಾರ್ಭಟ; ಸಂಪರ್ಕ ಕಳೆದುಕೊಂಡ ಜನರು - ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಕಾರವಾರದ ಮೂಡಲಮಕ್ಕಿ ಬಳಿ ಸೇತುವೆ ಸಂಪರ್ಕ ಕಳೆದುಕೊಂಡು ಜನರು ಸಂಚಾರಕ್ಕೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

uttara kannada
ಕರಾವಳಿಯಲ್ಲಿ ಮುಂದುವರಿದ ಮಳೆಯಾರ್ಭಟ; ಸೇತುವೆ ತುಂಬಿ ಸಂಪರ್ಕ ಕಳೆದುಕೊಂಡ ಜನರು

By

Published : Jul 6, 2023, 3:31 PM IST

ಕರಾವಳಿಯಲ್ಲಿ ಮುಂದುವರಿದ ಮಳೆಯಾರ್ಭಟ; ಸೇತುವೆ ತುಂಬಿ ಸಂಪರ್ಕ ಕಳೆದುಕೊಂಡ ಜನರು

ಕಾರವಾರ (ಉತ್ತರ ಕನ್ನಡ):ದೇಶಾದ್ಯಂತ ಮಾನ್ಸೂನ್​ ಚುರುಕಾಗಿದೆ. ರಾಜ್ಯದಲ್ಲಿ ಸದ್ಯ ಹಲವೆಡೆ ವರುಣ ಆರ್ಭಟಿಸುತ್ತಿದ್ದಾನೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಕಳೆದೆರಡು ದಿನಗಳಿಂದ ಎಡಬಿಡದೇ ಭಾರಿ ಮಳೆ ಸುರಿಯುತ್ತಿದೆ. ಕಾರವಾರದ ಮೂಡಲಮಕ್ಕಿ ಬಳಿ ಸೇತುವೆ ಸಂಪರ್ಕ ಕಳೆದುಕೊಂಡು ಜನರು ಸಂಚಾರಕ್ಕೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರವಾರ ನಗರ ಸಮೀಪದ ಬಿಣಗಾ, ಮೂಡಲಮಕ್ಕಿ, ಒಕ್ಕಲಕೇರಿ, ಅರಗಾ ನೌಕಾನೆಲೆಯ ಮುಖ್ಯ ಗೇಟ್ ಬಳಿ ಸಂಪೂರ್ಣ ಜಲಾವೃತವಾಗಿದೆ. ಚರಂಡಿಯನ್ನೂ ಮೀರಿ ಹೆದ್ದಾರಿ ಮೇಲೆ ನೀರು ಅಪಾಯಕಾರಿಯಾಗಿ ಹರಿಯುತ್ತಿದ್ದು, ನಗರವಾಸಿಗಳು ಹಾಗೂ ಪ್ರಯಾಣಿಕರಿಗೆ ಆತಂಕ ಸೃಷ್ಟಿಸಿದೆ. ಇನ್ನೂ ಹೈಚರ್ಚ್, ಹಬ್ಬುವಾಡ, ದೋಬಿಘಾಟ್ ರಸ್ತೆಗಳೂ ಕೂಡ ನೀರಿನಿಂದ ಜಲಾವೃತವಾಗಿದೆ. ಬೈತಖೋಲ ಭೂದೇವಿ ಗುಡ್ಡದ ಬಳಿ ನೌಕಾ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡಕುಸಿತವಾಗಿದೆ.

ಬಿಣಗಾದ ಒಕ್ಕಲಕೇರಿಯಲ್ಲಿ ನೀರು ತುಂಬಿಕೊಂಡು ಜನ ಭಯದಲ್ಲಿ‌ ಕಾಲ‌ ಕಳೆಯುವಂತಾಗಿದೆ. ಈಗಾಗಲೇ ಕೆಲ ಮನೆಗಳಿಗೆ ನೀರು ನುಗ್ಗಿದ್ದು ಜನ ಮನೆಯಿಂದ ಹೊರಗೆ ಬರುವುದಕ್ಕೂ ಭಯಪಡುವಂತಹ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರವೂ ವರುಣನ ಆರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ಇಂದು ಕೂಡ ಕರಾವಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಇದನ್ನೂ ಓದಿ:ಜುಲೈ 10 ರವರೆಗೆ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ: ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

ಶಾಲಾ ಮಕ್ಕಳಿಗೂ ಸಮಸ್ಯೆ: ತೀವ್ರ ಮಳೆ ಸುರಿಯುತ್ತಿರುವ ಕಾರಣ ಒಂದರಿಂದ 12ನೇ ತರಗತಿಯವರೆಗೆ ಎಲ್ಲಾ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ರಜೆ ಘೋಷಿಸಿದ್ದಾರೆ. ಆದರೆ, ರಜೆ ಘೋಷಣೆ ವಿಚಾರ ಸರಿಯಾಗಿ ಜನರಿಗೆ ತಲುಪದೇ ಜಿಲ್ಲೆಯ ಹಲವೆಡೆ ಮಕ್ಕಳು ಶಾಲೆಗೆ ತೆರಳಿದ್ದರು. ಬಳಿಕ ಶಿಕ್ಷಕರೇ ಮಕ್ಕಳನ್ನು ವಾಪಸ್ಸು ಮನೆಗೆ ಕಳುಹಿಸಿದ್ದಾರೆ. ಈ ನಡುವೆ ರಸ್ತೆಯಲ್ಲಿ ನೀರು ನಿಂತಿದ್ದು, ಮಕ್ಕಳು ಕೂಡ ತೊಂದರೆ ಅನುಭವಿಸುವಂತಾಯಿತು.

ಇನ್ನು ಕಾರವಾರದ ಬಿಣಗಾದ ಹಳೆಯ ರಾಷ್ಟ್ರೀಯ ಹೆದ್ದಾರಿ ಕೂಡ ನೀರಿನಿಂದ ಆವೃತವಾಗಿದ್ದು, ವಾಹನಗಳ ಸಂಚಾರಕ್ಕೆ ಅಡೆತಡೆಯಾಗಿದೆ. ಮೂಡಲಮಕ್ಕಿ ಗ್ರಾಮದ ಸೇತುವೆಯ ಮೇಲೆ ನೀರು ಹರಿಯಲಾರಂಭಿಸಿದ್ದು, ಇದರಿಂದಾಗಿ ಸುಮಾರು 200ಕ್ಕೂ ಅಧಿಕ ಮನೆಗಳ ಸಂಪರ್ಕ ಕಡಿತಗೊಂಡಿದೆ. ಉದ್ಯೋಗಕ್ಕೆ ತೆರಳಲಾಗದೇ ಯುವಕರು, ಮಹಿಳೆಯರು ಪರದಾಡಿದ್ದಾರೆ.

ನೌಕಾನೆಲೆಯ ಕಾಮಗಾರಿಯಿಂದಾಗಿ ಮಳೆ ನೀರು ಸಮುದ್ರಕ್ಕೆ ಸೇರುವ ಕಾಲುವೆಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕಡೆಗಳಲ್ಲಿ ನೀರು ತುಂಬಿಕೊಂಡಿದೆ. ನಗರದ ಬಹುತೇಕ ಕಡೆ ಚರಂಡಿ ವ್ಯವಸ್ಥೆ ಸರಿಯಿಲ್ಲದೇ ಸಮಸ್ಯೆಯಾಗಿದ್ದು, ಇನ್ನು ಕೆಲವೆಡೆ ಬಾರಿ ಪ್ರಮಾಣದಲ್ಲಿ ಮಳೆ ಸುರಿದು ರಭಸದಲ್ಲಿ ನೀರು ಹರಿದುಬಂದ ಕಾರಣ ತೀವ್ರ ಸಮಸ್ಯೆಯಾಗಿದೆ.

ಇದನ್ನೂ ಓದಿ:Monsoon Rain: ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ.. ಖಾಸಗಿ ಶಿಕ್ಷಣ ಸಂಸ್ಥೆಯ ಮೇಲ್ಛಾವಣಿ ಕುಸಿತ, ರಜೆ ಹಿನ್ನೆಲೆ ತಪ್ಪಿತು ದುರಂತ

ABOUT THE AUTHOR

...view details