ಶಿರಸಿ :ಜಿಲ್ಲೆಯ ಹಳಿಯಾಳ, ಮುಂಡಗೋಡ ತಾಲೂಕುಗಳಲ್ಲಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಹಳಿಯಾಳ ತಾಲೂಕಿನಲ್ಲಿ ಸಿಡಿಲು ಬಡಿದು ವೃದ್ದ ರೈತನೊರ್ವ ಸಾವನ್ನಪ್ಪಿದರೆ, ಮುಂಡಗೋಡಿನಲ್ಲಿ ಒಂದು ಎತ್ತು ಮೃತಪಟ್ಟಿದೆ.
ಹಳಿಯಾಳದ ತಾಲೂಕಿನ ನೇರಲಗ ಗ್ರಾಮದಲ್ಲಿ ನರಸಪ್ಪ ಜಯವಂತ ಕದಂ (60) ಸ್ಥಳದಲ್ಲೇ ಮೃತಪಟ್ಟ ರೈತ. ಅವರು ತಮ್ಮ ಹೊಲದಲ್ಲಿದ್ದ ಜಾನುವಾರಿಗೆ ಮೇವು ನೀಡಲು ತೆರಳಿದ್ದಾಗ ಸಿಡಿಲು ಅಪ್ಪಳಿಸಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನು ತಾಲೂಕಿನ ಹುನಗುಂದ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎತ್ತು ಸತ್ತಿದೆ.
ಜಿಲ್ಲೆಯ ಹಳಿಯಾಳ ಮತ್ತು ಮುಂಡಗೋಡ ತಾಲೂಕುಗಳಲ್ಲಿ ಭಾರೀ ಮಳೆ ಸುರಿದಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ ಮುಂಡಗೋಡಿನಲ್ಲಿ ಭಾರಿ ಗಾಳಿಯಿಂದಾಗಿ 15ರಿಂದ 20 ಎಕರೆಗಳಷ್ಟು ಬಾಳೆ ಮತ್ತು ಮಾವಿನ ತೋಟಕ್ಕೆ ಹಾನಿಯಾಗಿದೆ. ಬಾಳೆ ಗಿಡಗಳು ಮುರಿದು ಬಿದ್ದಿದ್ದರೆ, ಫಸಲಿಗೆ ಬಂದಿದ್ದ ಮಾವು ನೆಲಕಚ್ಚಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳ ಮೇಲೆ ಹೊದಿಸಲಾಗಿದ್ದ ಸಿಮೆಂಟ್ ಶೀಟ್‌ಗಳು ಹಾರಿಹೋಗಿವೆ. ಇಂದೂರು ಗ್ರಾಮದಲ್ಲಿ ಏಳೆಂಟು ಮನೆಗಳ ಛಾವಣಿಯ ಶೀಟ್‌ಗಳು ಹಾರಿ ಹೋಗಿವೆ. ಮರಗಳು ಮುರಿದು ಮನೆಗಳ ಮೇಲೆ ಬಿದ್ದಿವೆ.
ಹಳಿಯಾಳ ಪಟ್ಟಣದಲ್ಲಿ ಅರ್ಧ ಗಂಟೆ ರಭಸದ ಗಾಳಿ ಮಳೆಯಾಗಿದ್ದು, ಹತ್ತಾರು ವಿದ್ಯುತ್ ಕಂಬಗಳು, ತೆಂಗಿನ ಮರಗಳು ಮುರಿದು ಬಿದ್ದಿವೆ. ಉಳಿದಂತೆ, ಶಿರಸಿ, ಸಿದ್ದಾಪುರ, ಯಲ್ಲಾಪುರ ಸುತ್ತಮುತ್ತ ದಟ್ಟವಾದ ಮೋಡ ಕವಿದು, ನಾಲ್ಕಾರು ಹನಿ ತುಂತುರು ಮಳೆಯಾಯಿತು.