ಭಟ್ಕಳ:ಮದ್ಯವ್ಯಸನಿಗಳು ಮದ್ಯಪಾನದಿಂದ ಹೊರಬರಬೇಕು ಆಗ ಮಾತ್ರ ಶಿಬಿರ ಕೈಗೊಂಡವರಿಗೆ ಹಾಗೂ ಕುಟುಂಬದವರಿಗೆ ಸಾರ್ಥಕವಾಗಲಿದೆ ಎಂದು ಮಾಜಿ ಶಾಸಕ ಜೆ ಡಿ ನಾಯ್ಕ ಹೇಳಿದ್ದಾರೆ.
ಸರ್ಕಾರ ಮದ್ಯ ಮಾರಾಟ ಮತ್ತು ಸಾಗಾಟದ ಮೇಲೆ ಇನ್ನಷ್ಟು ಕಡಿವಾಣ ಹಾಕಬೇಕಿದೆ.. ಮಾಜಿ ಶಾಸಕ ಜೆ ಡಿ ನಾಯ್ಕ ಶ್ರೀನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉತ್ತರಕನ್ನಡ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಉತ್ತರ ಕನ್ನಡ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಗಾಂಧಿ ಸ್ಮೃತಿ ಜನ ಜಾಗೃತಿ ಜಾಥಾ ಮತ್ತು ಪಾನ ಮುಕ್ತರ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮದ್ಯಪಾನದಿಂದ ಜೀವನಕ್ಕೆ ಮಾರಕವಾಗಲಿದೆ. ಇದರಿಂದ ಮನೆಯ ಮಹಿಳೆಯರಿಗೆ ಮಕ್ಕಳಿಗೆ ನಿತ್ಯವೂ ಕಿರಿಕಿರಿಯಾಗಲಿದೆ. ಗಾಂಧೀಜಿ ಅವರ ಪಾನಮುಕ್ತ ದೇಶದ ಕನಸನ್ನ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ನನಸು ಮಾಡಲು ಪ್ರಯತ್ನಿಸುತ್ತಿದೆ.
ಸರ್ಕಾರ ಸರಾಯಿ ನಿರ್ಮೂಲನೆಗೆ ಕೆಲಸ ಮಾಡುತ್ತಿದೆ. ಆದರೆ, ಗೂಡಂಗಡಿಯಲ್ಲಿ ಮಾರಾಟ ಮಾತ್ರ ನಿಲ್ಲಿಸಲು ಸಾಧ್ಯವಾಗಿಲ್ಲ. ಅದರಲ್ಲೂ ಕೊಂಕಣ ರೈಲ್ವೆ ಮೂಲಕ ಗೋವಾ ಮಡಗಾಂವ್ ಮೂಲಕ ಸಾಕಷ್ಟು ಮದ್ಯ ಮಾರಾಟ ಹಾಗೂ ಸಾಗಾಟ ನಡೆಯುತ್ತಿದ್ದು, ರೈಲ್ವೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಇದೆಯೋ,ಇಲ್ಲವೋ ಎಂಬುದು ತಿಳಿಯುತ್ತಿಲ್ಲ. ಮೊದಲು ಗೋವಾದಿಂದ ಸಾಗಾಟವಾಗುವ ಮದ್ಯ ನಿಲ್ಲಬೇಕು. ಶೇಕಡಾವಾರು ರೀತಿಯಲ್ಲಿ ಮದ್ಯಕ್ಕೆ ಕಡಿವಾಣ ಬೀಳಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಸಮಾಜ ಸೇವಕ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಸರ್ಕಾರ ಕೇವಲ ಬಾಯಿ ಮಾತಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದೆ. ಆದರೆ, ಮದ್ಯಪಾನಿಗಳನ್ನು ಮದ್ಯದಿಂದ ತಪ್ಪಿಸಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ಪ್ರಾಯೋಗಿಕವಾಗಿ ಉತ್ತಮ ಕಾರ್ಯ ಮಾಡುತ್ತಾ ಬಂದಿದೆ. ಸರ್ಕಾರದ ಯೋಜನೆಯನ್ನು ಮನೆ ಮನೆಗೆ ತಲುಪುವಂತೆ ಹಾಗೂ ಅದರ ಸಂಪೂರ್ಣ ಉಪಯೋಗ ಜನರಿಗೆ ಸಿಗುವಂತೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ಮಾಡುತ್ತಿದೆ ಎಂದರು.
ನಂತರ ಸಾರಾಯಿ ಚಟದಿಂದ ಮುಕ್ತರಾದ ನಾಗರಾಜ ಕಂಚುಗಾರ ಅವರ ಪತ್ನಿ ಮಾತನಾಡಿ, ಪತಿಯ ಕುಡಿತದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ನನ್ನ ಮಗುವಿನ ಮುಖ ನೋಡಿಕೊಂಡು ಜೀವನ ನಡೆಸಿಕೊಂಡು ಬಂದಿದ್ದೇನೆ. ಈಗ ನನ್ನ ಪತಿ ಕುಡಿತದಿಂದ ಮುಕ್ತರಾಗಿದ್ದಾರೆ ಎಂದರು. ಇದೇ ವೇಳೆ 150ಕ್ಕೂ ಅಧಿಕ ಪಾನಮುಕ್ತ ಶಿಬಿರದಲ್ಲಿ ಪಾಲ್ಗೊಂಡ ಮದ್ಯವ್ಯಸನಿಗಳನ್ನು ಅಭಿನಂದಿಸಲಾಯಿತು.