ಶಿರಸಿ (ಉತ್ತರ ಕನ್ನಡ): ಗಣೇಶ ಚತುರ್ಥಿ ಸಮೀಪಿಸುತ್ತಿದೆ. ರಾಜ್ಯಾದ್ಯಂತ ಭರ್ಜರಿ ತಯಾರಿ ನಡೆಯುತ್ತಿದೆ. ಕೋವಿಡ್ ಸಾಂಕ್ರಾಮಿಕದ ಕಾರಣ ಕಳೆದ ಎರಡ್ಮೂರು ವರ್ಷಗಳಿಂದ ಸಂಭ್ರಮ ಕಳೆದುಕೊಂಡಿದ್ದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಕಳೆಗಟ್ಟುವ ಲಕ್ಷಣ ಗೋಚರಿಸಿದೆ. ಇದಕ್ಕಾಗಿ ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ತಯಾರಿ ಜೋರಾಗಿದೆ. ಉತ್ಸವ ಆಯೋಜಿಸುವ ಸಮಿತಿಗಳು ಸಿದ್ಧತೆಯಲ್ಲಿ ತೊಡಗಿವೆ.
ಕಳೆದ ಎರಡ್ಮೂರು ವರ್ಷಗಳಿಂದ ಉತ್ಸವಕ್ಕೆ ವಿಧಿಸಿದ್ದ ನಿರ್ಬಂಧಗಳು ಈ ಬಾರಿ ಇಲ್ಲದ ಕಾರಣ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ. ಕಳೆದ ವರ್ಷ ಗಣೇಶ ಚತುರ್ಥಿಯಲ್ಲಿ ಸಾರ್ವಜನಿಕವಾಗಿ ಪೂಜಿಸಲ್ಪಡುವ ಗಣೇಶ ಮೂರ್ತಿ 2 ಅಡಿ ಮೀರಬಾರದು ಎಂಬ ನಿಯಮವಿತ್ತು. ಹೀಗಾಗಿ ದೊಡ್ಡ ಮೂರ್ತಿಗಳು ಕಾಣಸಿಗಲಿಲ್ಲ. ಈಗ ಪುನಃ ಎಲ್ಲೆಡೆ ಸಾರ್ವಜನಿಕ ಉತ್ಸವಕ್ಕಾಗಿ ದೊಡ್ಡ ದೊಡ್ಡ ಗಾತ್ರದ ಮೂರ್ತಿಗಳು ಸಿದ್ಧಗೊಳ್ಳುತ್ತಿವೆ. ಶಿರಸಿ ತಾಲೂಕಿನಲ್ಲಿ ಸುಮಾರು 224 ಹಾಗೂ ಸಿದ್ದಾಪುರ ತಾಲೂಕಿನಲ್ಲಿ 169 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಯೋಜನೆಗೊಳ್ಳುತ್ತಿದೆ. ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ಕಲಾವಿದರು ನಿರ್ಮಿಸುತ್ತಿದ್ದಾರೆ.
ಮೂರು ವರ್ಷದ ಬಳಿಕ ಉತ್ಸವವನ್ನು ಅದ್ಧೂರಿಯಾಗಿಸಲು ಸಮಿತಿಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಆಕರ್ಷಕ ಕಲಾಕೃತಿಗಳ ಸ್ಥಾಪನೆ, ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆಗೂ ತಯಾರಿ ನಡೆಯುತ್ತಿದೆ. ದೇವಿಕೆರೆ, ಮರಾಠಿ ಕೊಪ್ಪ, ಶಿವಾಜಿ ಚೌಕ, ಹನುಮಗಿರಿ ಸೇರಿದಂತೆ ಹಲವೆಡೆಗಳಲ್ಲಿ ಈಗಾಗಲೇ ಹಬ್ಬದ ವಾತಾವರಣ ಕಾಣಿಸುತ್ತಿದೆ.