ಕಾರವಾರ :ಕರಾವಳಿಯಲ್ಲಿ ಸರ್ಕಾರದ ನಿಯಮದಂತೆ ಮೀನುಗಾರಿಕೆ ಮೇಲಿನ 60 ದಿನಗಳ ನಿಷೇಧದ ಅವಧಿ ಮುಕ್ತಾಯವಾಗಿದೆ. ಮೀನುಗಾರರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋಟು, ಬಲೆಗಳ ರಿಪೇರಿ ಮಾಡಿಸಿಕೊಂಡು ಮೀನುಗಾರಿಕೆಗೆ ಇಳಿಯಲು ಸಿದ್ಧರಾಗಿದ್ದರು. ಆದರೆ, ಮೀನುಗಾರಿಕೆಗೆ ತೆರಳಬೇಕಾದ ಬೋಟುಗಳು ಮಾತ್ರ ಬಂದರಿನಲ್ಲೇ ಲಂಗರು ಹಾಕಿ ನಿಂತಿವೆ.
ವರುಣನ ಅಬ್ಬರದಿಂದಾಗಿ ಕರಾವಳಿಯಲ್ಲಿ ಮತ್ತೆ ಮೀನುಗಾರಿಕೆ ಆರಂಭವಾದ ಬೆನ್ನಲ್ಲೇ ಸ್ಥಗಿತಗೊಂಡಿದೆ. ಹವಾಮಾನ ಇಲಾಖೆ ಆಗಸ್ಟ್ 11ರ ವರೆಗೆ ಭಾರಿ ಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಬಂದರಿನಲ್ಲೇ ನೂರಾರು ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳದೇ ಲಂಗರು ಹಾಕಿ ನಿಂತಿವೆ.
60 ದಿನಗಳ ಮೀನುಗಾರಿಕೆ ನಿರ್ಬಂಧದ ಬಳಿಕ ಮತ್ತೆ ನಿರ್ಬಂಧ :ಜೂನ್ ಹಾಗೂ ಜುಲೈ ತಿಂಗಳ 61 ದಿನಗಳ ನಿಷೇಧ ಅವಧಿ ಬಳಿಕ ಸಂಪ್ರದಾಯದಂತೆ ಆಗಸ್ಟ್ 1 ರಿಂದ ಮೀನುಗಾರಿಕೆ ಪ್ರಾರಂಭವಾಗುತ್ತದೆ. ಅದರಂತೆ ಈ ಬಾರಿ ಕಾರವಾರದ ಮೀನುಗಾರರು ಮೀನುಗಾರಿಕೆಯನ್ನು ಪ್ರಾರಂಭಿಸಿದ್ದರಾದರೂ ಅಗಸ್ಟ್ 2 ರಿಂದಲೇ ಮಳೆಯ ಮುನ್ಸೂಚನೆ ನೀಡಿದ ಹಿನ್ನಲೆ ಬಂದರಿಗೆ ವಾಪಸ್ ಆಗಿದ್ದರು.
ಜಿಲ್ಲೆಯಷ್ಟೇ ಅಲ್ಲದೇ ನೆರೆಯ ಉಡುಪಿ, ಮಲ್ಪೆ ಸೇರಿದಂತೆ ಗೋವಾ, ತಮಿಳುನಾಡಿನ ಹೊರರಾಜ್ಯದ ಬೋಟುಗಳು ಸಹ ಕಾರವಾರ ಬಂದರು ಪ್ರದೇಶದಲ್ಲಿ ಲಂಗರು ಹಾಕಿ ನಿಂತಿವೆ. ಇದರಿಂದ ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದ ಬೋಟುಗಳ ಕಾರ್ಮಿಕರಿಗೆ ನಿರಾಸೆಯಾಗಿದ್ದು, ಕೆಲಸವಿಲ್ಲದೇ ಖಾಲಿ ಕೂರುವಂತಾಗಿದೆ.