ಕಾರವಾರ (ಉತ್ತರ ಕನ್ನಡ):ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಬಂದರು ಅಭಿವೃದ್ಧಿಗೆ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮೀನುಗಾರಿಕಾ ಸಚಿವ ಎಸ್ ಅಂಗಾರ ಅವರ ಎದುರೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೀನುಗಾರರು ಬೆದರಿಕೆಯೊಡ್ಡಿದ ಘಟನೆ ಕಾರವಾರದಲ್ಲಿ ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಸಾಗರಮಾಲಾ ಯೋಜನೆ ಅನುಷ್ಠಾನ ಕುರಿತ ಅಹವಾಲು ಸಭೆಯ ಬಳಿಕ ಶಾಸಕರೊಂದಿಗೆ ಮಾತಿಗೆ ಇಳಿದ ಮೀನುಗಾರರು, ಸಾಗರಮಾಲ ಯೋಜನೆ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಪಟ್ಟು ಹಿಡಿದರು.
ಬಂದರು ನಿರ್ಮಾಣಕ್ಕೆ ವಿರೋಧ.... ಒಂದೊಮ್ಮೆ ಯೋಜನೆ ಜಾರಿಗೊಳಿಸಲು ಮುಂದಾದಲ್ಲಿ ಮೀನುಗಾರರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೀನುಗಾರಿಕಾ ಸಚಿವ ಎಸ್.ಅಂಗಾರ ಹಾಗೂ ಶಾಸಕಿ ರೂಪಾಲಿ ನಾಯ್ಕ್ ಅವರಿಗೆ ಬೆದರಿಕೆಯೊಡ್ಡಿದ್ದರು.
ಇದನ್ನೂ ಓದಿ:ಬೈಕ್ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ : ಗಾಯಾಳು ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
ಈ ವೇಳೆ ಸಿಟ್ಟಾದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಾಲಿಗೆ ಬಿಗಿ ಹಿಡಿದು ಮಾತನಾಡಿ. ಶಾಸಕರು, ಸಚಿವರ ಎದುರೇ ಏನು ಮಾತನಾಡುತ್ತೀರಾ ಎಂದು ಗದರಿದರು. ಬಳಿಕ ಮೀನುಗಾರರು ಯೋಜನೆ ಜಾರಿಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.