ಕರ್ನಾಟಕ

karnataka

ETV Bharat / state

ಉ.ಕನ್ನಡದಲ್ಲಿ ಹೆಚ್ಚಿದ ಮೀನು ಉತ್ಪಾದನೆ: ಡೀಸೆಲ್ ದರ ಏರಿಕೆಯಿಂದ ಮಿನುಗಾರರಿಗೆ ಸಿಗದ ಲಾಭ - ಆಳ ಸಮುದ್ರದ ಮೀನುಗಾರಿಕೆ

National Fish Farmers Day: ಕಳೆದ ಕೆಲವು ವರ್ಷಗಳಿಂದ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದ್ದ ಮೀನುಗಾರರು ಈ ಬಾರಿ ಭರ್ಜರಿ ಮೀನಿನ ಶಿಖಾರಿ ಮಾಡಿರುವುದು ಇಲಾಖೆಯ ದಾಖಲೆಗಳಿಂದ ಗೊತ್ತಾಗುತ್ತದೆ. ಆದರೆ, ಮೀನಿನ ಉತ್ಪಾದನೆ ಹೆಚ್ಚಾದಂತೆ ವೆಚ್ಚವೂ ಕೂಡ ಏರುತ್ತಿದ್ದು ಹೇಳಿಕೊಳ್ಳುವಂತಹ ಲಾಭವಿಲ್ಲ ಎಂಬುದು ಮೀನುಗಾರರ ಮಾತು.

fish production in uttara kannada
ಮೀನು ಉತ್ಪಾದನೆ

By

Published : Jul 10, 2022, 8:57 AM IST

ಕಾರವಾರ: ಆಗಸ್ಟ್ 1 ರಿಂದ ಆಳ ಸಮುದ್ರದ ಮೀನುಗಾರಿಕೆ ಪುನಃ ಪ್ರಾರಂಭವಾಗಲಿದೆ. ಕೊರೊನಾ, ಪ್ರವಾಹ, ಹವಾಮಾನ ವೈಪರೀತ್ಯ ಹೀಗೆ ನಾನಾ ಕಾರಣದಿಂದ ಕಳೆದ ಕೆಲ ವರ್ಷದಿಂದ ಉತ್ತರಕನ್ನಡದಲ್ಲಿ ಕುಂಠಿತಗೊಂಡಿದ್ದ ಮೀನುಗಾರಿಕೆ ಈ ಬಾರಿ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ 14,466 ಮೆಟ್ರಿಕ್ ಟನ್ ಮೀನು ಉತ್ಪಾದನೆ ಹೆಚ್ಚಳವಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಪರ್ಸಿಯನ್, ಟ್ರಾಲರ್, ಆಳ ಸಮುದ್ರದ ಟ್ರಾಲರ್ ದೋಣಿಗಳೂ ಸೇರಿದಂತೆ ಒಟ್ಟು 3 ಸಾವಿರಕ್ಕೂ ಹೆಚ್ಚು ಯಾಂತ್ರೀಕೃತ ಬೋಟ್‌ಗಳಿವೆ. ಈ ಬಾರಿಯ ಹಂಗಾಮಿನಲ್ಲಿ ಆರಂಭದಿಂದಲೂ ಬಹುತೇಕ ಉತ್ತಮ ಮೀನುಗಾರಿಕೆ ನಡೆದಿದ್ದು, ಒಟ್ಟು 1,17,266 ಮೆಟ್ರಿಕ್ ಟನ್ ಮೀನು ಉತ್ಪಾದಿಸಲಾಗಿದೆ. 2020-21 ರಲ್ಲಿ 1,02,800 ಮೆಟ್ರಿಕ್ ಟನ್ ಮೀನು ಉತ್ಪಾದನೆ ಮಾಡಲಾಗಿತ್ತು. ಈ ಬಾರಿ 14,446 ಮೆಟ್ರಿಕ್ ಟನ್ ಹೆಚ್ಚು ಉತ್ಪಾದನೆಯಾಗಿದೆ. 2018-19ರಲ್ಲಿ 10.85 ಮೆಟ್ರಿಕ್ ಟನ್, 2019-20ರಲ್ಲಿ 10.19 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು.

ಹಿಡುವಳಿ ಹೆಚ್ಚಳವಾದರೂ ಸಿಗದ ಲಾಭ:ಕಳೆದ ಬಾರಿಗಿಂತ ಈ ಸಲ ಮೀನುಗಾರಿಕೆ ಉತ್ತಮವಾಗಿದೆ. ಆದರೂ ಇದರಿಂದ ಮೀನುಗಾರರಿಗೆ ಲಾಭವಾಗಿಲ್ಲ. ಈ ಹಿಂದೆ ಲೀ.ಗೆ 60-70 ರೂಪಾಯಿಗೆ ಸಿಗುತ್ತಿದ್ದ ಡೀಸೆಲ್ ಇದೀಗ ನೂರರ ಗಡಿ ದಾಟಿದೆ. ಎಷ್ಟೇ ಮೀನುಗಾರಿಕೆ ಹೆಚ್ಚಾದರೂ ಡೀಸೆಲ್ ದರ ಏರಿಕೆಯಿಂದಾಗಿ ಹೆಚ್ಚಿನ ಹಣ ಮೀನುಗಾರರ ಕೈ ಸೇರುತ್ತಿಲ್ಲ.

ಮೀನುಗಾರಿಕೆ ಇಲಾಖೆಯ ಪ್ರಕಾರ, 2021-22ನೇ ಸಾಲಿನ ಮಾರ್ಚ್‌ವರೆಗೆ ರಾಜ್ಯದ ಕರಾವಳಿಯಲ್ಲಿ 5.74 ಲಕ್ಷ ಟನ್ ಆಳ ಸಮುದ್ರ ಮೀನು ಉತ್ಪಾದನೆಯಾಗಿದೆ. ಅದರಲ್ಲಿ ಪರ್ಸಿಯನ್ ಬೋಟ್​ಗಳು ಉತ್ತಮ ಮೀನು ಹಿಡಿದಿವೆ. ಆದರೆ, ಟ್ರಾಲರ್ ಬೋಟ್‌ಗಳಿಗೆ ತಕ್ಕ ಮಟ್ಟಿಗೆ ಮೀನು ದೊರೆತರೂ ಡೀಸೆಲ್ ದರ ಹೊಡೆತ ಕೊಟ್ಟಿದೆ. ಸಾಮಾನ್ಯವಾಗಿ ಟ್ರಾಲರ್ ಬೋಟ್‌ಗಳು 3-4 ದಿನ ಮೀನುಗಾರಿಕೆಗೆ ತೆರಳುತ್ತವೆ. ಒಂದು ಟ್ರಾಲರ್ ಬೋಟ್‌ ಒಮ್ಮೆ ಮೀನುಗಾರಿಕೆಗೆ ತೆರಳಲು 500-700 ಲೀಟರ್ ಡೀಸೆಲ್ ಬೇಕಾಗುತ್ತದೆ. ಆದರೆ, ಈ ಬಾರಿ 100 ರೂ.ಗೆ ಡೀಸೆಲ್ ಮಾರಾಟವಾಗುತ್ತಿದ್ದು ಬೋಟ್ ಮಾಲಿಕರಿಗೆ ಮೀನುಗಾರಿಕೆ ನಡೆಸುವುದೇ ಕಷ್ಟಸಾಧ್ಯ ಎನ್ನುತ್ತಾರೆ ಉತ್ತರಕನ್ನಡ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್.

ಸಿಗಡಿ ಉತ್ಪಾದನೆ ಕುಂಠಿತ:ಈ ವರ್ಷದ ಮೀನುಗಾರಿಕೆ ಹಂಗಾಮಿನಲ್ಲಿ ಬಂಗುಡೆ ಮೀನುಗಳೇ ಹೆಚ್ಚಾಗಿ ಲಭಿಸಿವೆ. ಪಾಪ್ಲೇಟ್, ಸಿಗಡಿ, ಇಶ್ವಣಗಳಂಥ ದುಬಾರಿ ಮೀನುಗಳ ಉತ್ಪಾದನೆ ಕಡಿಮೆಯಾಗಿದೆ. ಸಿಗಡಿ ಉತ್ಪಾದನೆ ಶೇ.80ರಷ್ಟು ಕಡಿಮೆಯಾಗಿದೆ. ದಿನಕ್ಕೆ 100-150 ಕೆ.ಜಿ. ಸಿಗಡಿ ಹಿಡಿಯುತ್ತಿದ್ದ ಬೋಟ್‌ಗಳಿಗೆ ಈ ವರ್ಷ 20-30 ಕೆಜಿ ಸಿಗಡಿ ಕೂಡ ಸಿಕ್ಕಿಲ್ಲ. ಇದರಷ್ಟೇ ಬೆಲೆ ಇರುವ ಪಾಪ್ಲೇಟ್ ಮೀನು ಕೂಡ ಕಡಿಮೆಯಾಗಿದೆ. ಈ ಕಾರಣಕ್ಕೆ ಬೋಟುಗಳ ವಾರ್ಷಿಕ ದುಡಿಮೆ ಮೌಲ್ಯ ಹೆಚ್ಚಾಗಿಲ್ಲ. ಟ್ರಾಲರ್ ಬೋಟ್‌ಗಳು ವರ್ಷಕ್ಕೆ 25-30 ಲಕ್ಷ ರೂ. ಮೀನು ಉತ್ಪನ್ನ ಮಾಡಿದರೆ, ಅದರಲ್ಲಿ ಡೀಸೆಲ್ ವೆಚ್ಚವೇ 20-22 ಲಕ್ಷ ರೂ. ಆಗಿದೆ ಎನ್ನುತ್ತಾರೆ ಮೀನುಗಾರರು.

ABOUT THE AUTHOR

...view details