ಭಟ್ಕಳ:ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ವೈದ್ಯಾಧಿಕಾರಿಯ ವಿಚಾರಣೆ ನೆಡೆಸಲು ಬಂದ ಅಧಿಕಾರಿಗಳು ವೈದ್ಯರ ಉತ್ತಮ ಕಾರ್ಯ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ತಾಲೂಕು ವೈದ್ಯಾಧಿಕಾರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ ಅಪರೂಪದ ಘಟನೆ ಭಟ್ಕಳದಲ್ಲಿ ನಡೆದಿದೆ.
ಭಟ್ಕಳ ತಾಲೂಕು ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಅವರ ವಿರುದ್ಧ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿ ಈಶ್ವರ ನಾಯ್ಕ್ ಎಂಬುವವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದ ತಂಡ ತಾಲೂಕು ಆಸ್ಪತ್ರೆಗೆ ಆಗಮಿಸಿ ತನಿಖೆ ನಡೆಸುತ್ತಿತ್ತು. ಈ ವಿಷಯ ತಿಳಿದು ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ರವರು ಭಟ್ಕಳ ತಾಲೂಕು ಆಸ್ಪತ್ರೆಗೆ ವರ್ಗಾವಣೆಗೊಂಡು ಬಂದಾಗ ಆಸ್ಪತ್ರೆಯಲ್ಲಿ ಯಾವುದೇ ಮೂಲಭೂತ ವ್ಯವಸ್ಥೆ ಇಲ್ಲದೆ ಹಾಳು ಬಿದ್ದಿತ್ತು. ಹಗಲು ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸಿ ನಾಯಿಗಳ ವಾಸಸ್ಥಾನವಾಗಿದ್ದ ತಾಲೂಕು ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಮಾಡಿದ್ದರು. ಕೆಲಸ ಮುಗಿದರೂ ರೋಗಿಗಳೊಂದಿಗೆ ಇದ್ದು ಅವರ ಯೋಗಕ್ಷೇಮ ನೋಡಿಕೊಳ್ಳುತಿದ್ದರು. ಇದಲ್ಲದೇ ಕೋವಿಡ್ ಸಂದರ್ಭದಲ್ಲಿ ತಮಗೂ ಸೋಂಕು ಬಂದರೂ ಕಾರ್ಯವನ್ನು ಮರೆತಿರಲಿಲ್ಲ. ಜನರ ಪ್ರೀತಿ ಗಳಿಸಿದ್ದ ವೈದ್ಯೆ ಎಲ್ಲರ ಅಚ್ಚುಮೆಚ್ಚಿನ ತಾಯಿಯಾಗಿದ್ದರು ಎಂದು ಸಾರ್ವಜನಿಕರು ಕೊಂಡಾಡಿದ್ದಾರೆ.