ಕಾರವಾರ:ಎಂಎಲ್ಸಿ ಹಾಗೂ ಮಿನಿಸ್ಟರ್ ಒಬ್ಬರು ಯಾವುದೋ ವೈಯಕ್ತಿಕ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಾರಣದಿಂದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಅವರ ಯಾವುದೋ ಪರ್ಸನಲ್ ವಿಡಿಯೋ ಮಾಡಿ ಎಂಎಲ್ಸಿ ಹಾಗೂ ಒಬ್ಬರು ಮಿನಿಸ್ಟರ್ಗೆ ನೀಡಿದ್ದರು. ಅದನ್ನು ದೆಹಲಿ ನಾಯಕರಿಗೆ ಕೊಟ್ಟಿರುವ ಬಗ್ಗೆ ಎರಡು ತಿಂಗಳ ಹಿಂದೆಯೇ ನನಗೆ ಮಾಹಿತಿ ಲಭ್ಯವಾಗಿತ್ತು. ಈ ಕಾರಣದಿಂದಲೇ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ತಿಳಿಸಿದರು.
ಇದನ್ನೂ ಓದಿ:ಸಂತೋಷ್ ವಿರುದ್ಧ ಎಫ್ಐಆರ್: ಸಿಎಂಗೆ ಶುರುವಾಗುತ್ತಾ ಪೀಕಲಾಟ ..?
ಈ ವೈಯಕ್ತಿಕ ವಿಡಿಯೋದಲ್ಲಿ ಯಾವುದೋ ಗೌಪ್ಯ ವಿಚಾರ ಅಡಗಿದೆ. ವಿಡಿಯೋ ತೆಗೆದುಕೊಂಡಿದ್ದ ಎಂಎಲ್ಸಿ ಮತ್ತು ಮಂತ್ರಿ ಇಬ್ಬರೂ ಸೇರಿ ಸಿಎಂ ಮತ್ತು ಅವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಈ ಬಗ್ಗೆ ಸರ್ಕಾರ ತನಿಖೆ ಮಾಡಿದರೆ ಅರ್ಥವಿಲ್ಲ. ಸತ್ಯಾಂಶ ಏನಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಮಾದಕ ದ್ರವ್ಯದಿಂದ ಸರ್ಕಾರ ನಡೆಸಿದ್ದರು ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಗರಂ ಆದ ಡಿಕೆಶಿ, ನಳಿನ್ ಕುಮಾರ ಕಟೀಲ್ ಅವರಿಗೆ ಏನೋ ಹೆಚ್ಚುಕಮ್ಮಿ ಆಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಬೇಕು. ಹಾಗೆನಾದರೂ ಆಗಿದ್ದರೆ, ಎಫ್ಐಆರ್ ಯಾಕೆ ಮಾಡಿಲ್ಲ. ನಾನು ಕೂಡ ಅದೇ ಸರ್ಕಾರದಲ್ಲಿದ್ದೆ. ನಮ್ಮ ಪಕ್ಷದಲ್ಲಿದ್ದವರೇ, ಇದೀಗ ಅವರ ಪಕ್ಷದಲ್ಲಿದ್ದಾರೆ. ಈಗಾದ್ರೂ ಏಫ್ಐಆರ್ ದಾಖಲು ಮಾಡಬಹುದು. ಅವರಿಗೆ ಅಲ್ಪಸ್ವಲ್ಪ ಜ್ಞಾನ ಇದೆ ಅಂತಾ ತಿಳಿದಿದ್ದೆ. ಆದರೆ, ಅವರ ಇಂತಹ ಹೇಳಿಕೆ ಆ ಸ್ಥಾನಕ್ಕೆ ಕಳಂಕ ಬಂದ ಹಾಗೆ ಆಗುತ್ತದೆ. ಜವಾಬ್ದಾರಿಯುತ ವ್ಯಕ್ತಿ ಗೌರವದಿಂದ ನಡೆದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ..!
ಬಿಜೆಪಿಯಲ್ಲಿ ರಾಜಕೀಯ ಕಚ್ಚಾಟದ ವಿಚಾರ ಕುರಿತು ಬಿಜೆಪಿಯವರ ಆಂತರಿಕ ವಿಷಯ ನಮಗೆ ಸಂಬಂಧವಿಲ್ಲ. ಮೊದಲು ನಮ್ಮ ಮನೆಯನ್ನು ಸರಿಮಾಡಿಕೊಳ್ಳುತ್ತೇವೆ. ನಾವು ಆ ವಿಚಾರದಲ್ಲಿ ಭಾಗಿಯಾಗುವುದಿಲ್ಲ. ಸರ್ಕಾರದಲ್ಲಿ ಯಾರನ್ನು ಬೇಕಾದರೂ ಮಡಗಿಕೊಳ್ಳಲಿ, ಯಾರನ್ನು ಬೇಕಾದರೂ ಕಿತ್ತು ಹಾಕಲಿ, ಕೆಲವರು ನಮ್ಮ ಪಕ್ಷದಿಂದ ಅಲ್ಲಿಗೆ ಹೋಗಿದ್ದಾರೆ. ನಾವು ಅನುಭವಿಸಿದ ಹಾಗೆ ಮುಂದೆ ಅವರು ಅನುಭವಿಸಲಿದ್ದಾರೆ ಎಂದು ಹೇಳಿದರು.