ಕರ್ನಾಟಕ

karnataka

ETV Bharat / state

ನೌಕಾ ಪಡೆ ಕಾರ್ಯಾಚರಣೆ ಡಿಜಿಯಾಗಿ ರಿಯರ್ ಅಡ್ಮಿರಲ್ ಅತುಲ್ ಆನಂದ್​ಗೆ ಪದೋನ್ನತಿ - ರಿಯರ್ ಅಡ್ಮಿರಲ್ ಅತುಲ್ ಆನಂದ್

ಕರ್ನಾಟಕ ನೌಕಾ ವಲಯದ ಫ್ಲಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ.

rear admiral atul anand
ರಿಯರ್ ಅಡ್ಮಿರಲ್ ಅತುಲ್ ಆನಂದ್

By

Published : Apr 2, 2023, 11:36 AM IST

ಕಾರವಾರ:ಕರ್ನಾಟಕ ನೌಕಾ ವಲಯದ ಫ್ಲಾಗ್ ಆಫೀಸರ್ ಕಮಾಂಡಿಂಗ್ ಆಗಿದ್ದ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರನ್ನು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರನ್ನಾಗಿ ಪದೋನ್ನತಿಗೊಳಿಸಿ ಆದೇಶಿಸಲಾಗಿದ್ದು, ಅಧಿಕಾರ ವಹಿಸಿಕೊಂಡಿದ್ದಾರೆ.

1988ರ ಜನವರಿ 1ರಂದು ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜನೆಗೊಂಡ ಅತುಲ್ ಆನಂದ್, ಖಡಕ್ವಾಸ್ಲಾದಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಮೀರ್ಪುರದ ರಕ್ಷಣಾ ಸೇವೆಗಳ ಕಮಾಂಡ್ ಮತ್ತು ಸಿಬ್ಬಂದಿ ಕಾಲೇಜು ಹಾಗೂ ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ತರಬೇತಿ ಪಡೆದಿದ್ದರು. ಅಮೆರಿಕದ ಹವಾಯಿ ಏಷ್ಯಾ ಪೆಸಿಫಿಕ್ ಸೆಂಟರ್ ಫಾರ್ ಸೆಕ್ಯುರಿಟಿ ಸ್ಟಡೀಸ್‌ನಲ್ಲಿ ಪ್ರತಿಷ್ಠಿತ ಅಡ್ವಾನ್ಸ್ ಸೆಕ್ಯುರಿಟಿ ಕೋ- ಆಪರೇಶನ್ ಕೋರ್ಸ್ ಪಡೆದಿದ್ದಾರೆ.

ಎಂಫಿಲ್ ಮತ್ತು ಎಂಎಸ್ಸಿ ಡಿಫೆನ್ಸ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್, ಮಾಸ್ಟರ್ಸ್ ಇನ್ ಡಿಫೆನ್ಸ್ ಸ್ಟಡೀಸ್ ಮತ್ತು ಬಿಎಸ್ಸಿ ಪದವಿ ಪಡೆದಿರುವ ಇವರು, ನೌಕಾ ವೃತ್ತಿಜೀವನದಲ್ಲಿ ಟಾರ್ಪಿಡೊ ರಿಕವರಿ ನೌಕೆ ಐಎನ್ ಟಿಆರ್ ವಿ ಎ72, ಕ್ಷಿಪಣಿ ನೌಕೆ ಐಎನ್‌ಎಸ್ ಚಟಕ್, ಕಾರ್ವೆಟ್ ಐಎನ್‌ಎಸ್ ಖುಕ್ರಿ ಮತ್ತು ಡೆಸ್ಟ್ರಾಯರ್ ಐಎನ್‌ಎಸ್ ಮುಂಬೈ ಸೇರಿದಂತೆ ಹಲವೆಡೆ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಲ್ಲದೇ ಐಎನ್‌ಎಸ್ ಶಾರದಾ, ಐಎನ್‌ಎಸ್ ರಣವಿಜಯ್ ಮತ್ತು ಐಎನ್‌ಎಸ್ ಜ್ಯೋತಿಗಳಲ್ಲಿ ನ್ಯಾವಿಗೇಟಿಂಗ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದು, ಸೀ ಹ್ಯಾರಿಯರ್ ಸ್ಕ್ವಾಡ್ರನ್ ಐಎನ್‌ಎಎಸ್ 300ನ ನಿರ್ದೇಶನ ಅಧಿಕಾರಿ ಮತ್ತು ಡೆಸ್ಟ್ರಾಯರ್ ಐಎನ್‌ಎಸ್ ದೆಹಲಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ್ದಾರೆ.

ಜಾಯಿಂಟ್ ಡೈರೆಕ್ಟರ್ ಸ್ಟಾಫ್ ರಿಕ್ವೈರ್ಮೆಂಟ್ಸ್, ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ಡೈರೆಕ್ಟಿಂಗ್ ಸ್ಟಾಫ್, ಡೈರೆಕ್ಟರ್ ನೇವಲ್ ಆಪರೇಷನ್ಸ್ ಮತ್ತು ಡೈರೆಕ್ಟರ್ ನೇವಲ್ ಇಂಟೆಲಿಜೆನ್ಸ್ ಗಳಂಥ ಹುದ್ದೆಗಳನ್ನೂ ನಿರ್ವಹಿಸಿದ್ದಾರೆ. ರಕ್ಷಣಾ ಸಚಿವಾಲಯದ ಸಂಯೋಜಿತ ಪ್ರಧಾನ ಕಛೇರಿಯಲ್ಲಿ ನೌಕಾ ಕಾರ್ಯಾಚರಣೆಗಳು ಮತ್ತು ಕಾರ್ಯತಂತ್ರ, ಪರಿಕಲ್ಪನೆಗಳು ಮತ್ತು ರೂಪಾಂತರದ ಪ್ರಧಾನ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವಿ. ಇಷ್ಟೇ ಅಲ್ಲದೇ, ನೌಕಾಪಡೆಯ ಸಹಾಯಕ ಮುಖ್ಯಸ್ಥರಾಗಿ ಮತ್ತು ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಉಪ ಕಮಾಂಡೆಂಟ್ ಮತ್ತು ಮುಖ್ಯ ಬೋಧಕರಾಗಿಯೂ ಇದ್ದರು.

2021ರ ಡಿಸೆಂಬರ್‌ನಲ್ಲಿ ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಆಗಿ ಹೆಡ್ ಕ್ವಾರ್ಟರ್ ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ನೌಕಾ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸದಾ ಹಸನ್ಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಈವರೆಗೆ ರಿಯರ್ ಅಡ್ಮಿರಲ್ ಶ್ರೇಣಿಯಲ್ಲಿದ್ದು ಈಗ ವೈಸ್ ಅಡ್ಮಿರಲ್ ಶ್ರೇಣಿಗೆ ಪದೋನ್ನತಿ ಹೊಂದಿ ಡಿಜಿಯಾಗಿದ್ದಾರೆ. ಅತುಲ್ ಗೋಲ್ರುಖ್ ಅವರನ್ನು ವಿವಾಹವಾಗಿದ್ದು, ಮಗಳು ರಶ್ಮಿ ಡಿಜಿಟಲ್ ಮಾರ್ಕೆಟಿಂಗ್ ಉದ್ಯಮಿಯಾಗಿ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗ ರೋಹನ್ ಐರ್ಲೆಂಡ್‌ನ ಡಬ್ಲಿನ್ ಮೂಲದ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ.

ಇದನ್ನೂ ಓದಿ:1960 ರ ದಶಕದ ಸ್ಟಾರ್​ ಕ್ರಿಕೆಟಿಗ ಸಲೀಂ ದುರಾನಿ ನಿಧನ

ABOUT THE AUTHOR

...view details