ಕಾರವಾರ: ಸ್ಥಳೀಯ ವಾರ್ಡ್ಗಳ ನಾಮಫಲಕವನ್ನು ಕೊಂಕಣಿಯಲ್ಲಿ ಬರೆದಿದ್ದಕ್ಕೆ ಕಾರವಾರದಲ್ಲಿ ಭಾಷಾ ವಿವಾದಕ್ಕೆ ಕಾರಣವಾಗಿತ್ತು. ಸರ್ಕಾರವೇ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯನ್ನು ಹೇರುತ್ತಿದೆಯೆಂದು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರೆ, ಇತ್ತ ಕೊಂಕಣಿ ಭಾಷಿಗರು ವಾರ್ಡ್ಗಳಿಗೆ ಕೊಂಕಣಿ ಬೋರ್ಡ್ ಬೇಕೆಂದು ಪಟ್ಟು ಹಿಡಿದಿದ್ದರು. ಇದೀಗ ಕಾರವಾರ ನಗರಸಭೆ ಸದಸ್ಯರು ಕನ್ನಡದ ಜೊತೆ ಕೊಂಕಣಿ ಭಾಷೆಯಲ್ಲೂ ಬೋರ್ಡ್ ಹಾಕುವಂತೆ ಠರಾವು ಮಾಡಿದ್ದಾರೆ.
ಕೊಂಕಣಿಯಲ್ಲಿ ನಾಮಫಲಕ ಹಾಕಲು ನಿರ್ಧಾರ ನಗರಸಭೆ ವಾರ್ಡ್ಗಳ ಹೆಸರನ್ನು ಕನ್ನಡದ ಜೊತೆ ಕೊಂಕಣಿ ಭಾಷಿಕರಿಗೂ ತಿಳಿಯಲೆಂದು ಕೊಂಕಣಿ ಭಾಷೆಯಲ್ಲಿ ಹೋಲಿಕೆಯಾಗುವಂತೆ ಬರೆಸಿದ್ದು ಇದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕೊಂಕಣಿಯಲ್ಲಿ ಬರೆದಿದ್ದ ಬೋರ್ಡ್ಗೆ ಕಪ್ಪು ಮಸಿ ಬಳೆದು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು.
ಇತ್ತ ನಮ್ಮ ಮಾತೃ ಭಾಷೆ ಕೊಂಕಣಿಗೆ ಅವಮಾನ ಮಾಡಿದ್ದು, ಕಾರವಾರದಲ್ಲಿ ಕೊಂಕಣಿ ಬೋರ್ಡ್ ಸಹ ಬರೆಸಬೇಕು ಎಂದು ಕೊಂಕಣಿಯವರು ಪ್ರತಿಭಟನೆ ಮಾಡಿದ್ದರು. ಇದೀಗ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಭಾಷಾ ವಿವಾದ ಚರ್ಚೆಗೆ ಬಂದಿದ್ದು, ಸದಸ್ಯರುಗಳು ಕನ್ನಡದ ಜೊತೆ ಕೊಂಕಣಿ ಭಾಷೆಯಲ್ಲಿಯೂ ಬೋರ್ಡ್ಗಳನ್ನು ಬರೆಯುವಂತೆ ಠರಾವು ಮಾಡಲಾಗಿದೆ.
ಇನ್ನು ಕೊಂಕಣಿಯಲ್ಲಿ ಬರೆದಿದ್ದ ಬೋರ್ಡಿಗೆ ಮಸಿ ಬಳೆದಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರ ವಿರುದ್ಧ ದೂರು ಸಹ ದಾಖಲಾಗಿತ್ತು. ಘಟನೆ ಖಂಡಿಸಿ ಸ್ವತಃ ಪ್ರವೀಣ್ ಶೆಟ್ಟಿಯವರೇ ಕಾರವಾರಕ್ಕೆ ಆಗಮಿಸಿ ನಗರಸಭೆ ವಿರುದ್ಧ ಪ್ರತಿಭಟನೆ ಮಾಡಿದ್ದಲ್ಲದೇ ಮುಂದೆ ಮತ್ತೆ ಕೊಂಕಣಿಯಲ್ಲಿ ಬೋರ್ಡ್ ಬರೆಯಲು ಮುಂದಾದರೆ ಬೋರ್ಡನ್ನು ಧ್ವಂಸ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ತಾವು ಹಿಂದಿ ಭಾಷೆಯಲ್ಲಿ ಬರೆದಿಲ್ಲ. ದೇವನಾಗರಿ ಲಿಪಿಯಲ್ಲಿ ಬರೆದಿದ್ದು ಸರ್ಕಾರಕ್ಕೆ ಈ ಬಗ್ಗೆ ಠರಾವು ಮಾಡಿರುವ ಪ್ರಸ್ತಾಪ ಕಳುಹಿಸಲಾಗಿದೆ. ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆಯೆಂಬುದನ್ನು ಕಾದು ನೋಡಬೇಕೆಂದು ನಗರಸಭೆ ಅಧ್ಯಕ್ಷರು ಹೇಳಿದ್ದಾರೆ.
ಇದನ್ನೂ ಓದಿ:ಮಂಗಳೂರು ಟು ನವದೆಹಲಿಗೆ ನೇರ ವಿಮಾನ.. 140 ಜನರನ್ನು ಹೊತ್ತು ರಾಷ್ಟ್ರ ರಾಜಧಾನಿ ತಲುಪಿದ ಫ್ಲೈಟ್!
ಇನ್ನೂ ಭಟ್ಕಳ ಪುರಸಭೆ ವ್ಯಾಪ್ತಿಯಲ್ಲೂ ಇದೇ ರೀತಿ ಭಾಷಾ ವಿವಾದ ಸೃಷ್ಟಿಯಾಗಿದ್ದು, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸರ್ಕಾರದ ನಾಮಫಲಕಗಳು ಕನ್ನಡ, ಇಂಗ್ಲಿಷ್ ಭಾಷೆ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಬರೆಯುವಂತಿಲ್ಲ ಎಂದು ಸೂಚಿಸಿದ್ದಾರೆ. ಇದರ ನಡುವೆ ಕಾರವಾರ ನಗರಸಭೆಯಲ್ಲಿ ಕೊಂಕಣಿಯಲ್ಲಿ ಬೋರ್ಡ್ ಬರೆಯುವಂತೆ ಠರಾವು ಮಾಡಿದ್ದು, ಜಿಲ್ಲಾಡಳಿತ, ಸರ್ಕಾರ, ನಗರಸಭೆಯ ಠರಾವಿಗೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.