ಶಿರಸಿ : ಆನ್ಲೈನ್ ಗೇಮ್ ಬಗ್ಗೆ ಹುಷಾರ್!. ಇವುಗಳು ಜೀವನ ಮತ್ತು ಜೀವ ಎರಡನ್ನೂ ಹಾಳು ಮಾಡುತ್ತವೆ ಎಂದು ಅನೇಕರು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೂ ಇಲ್ಲೋರ್ವ ಆನ್ಲೈನ್ ಗೇಮ್ ಹುಚ್ಚಿಗೆ ತನ್ನ ಬದುಕನ್ನೇ ಕಳೆದುಕೊಂಡಿದ್ದಾನೆ. ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಶಿರಸಿ ತಾಲೂಕಿನ ಬಾಳೆತೋಟದ ವಿಜೇತ ಹೆಗಡೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನಿಗೆ ಆನ್ಲೈನ್ ಗೇಮಿನ ಗೀಳಿದ್ದು, 9 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಕೆಲವರಿಂದ ಕೈಗಡ ಸಾಲ ಸಹ ಪಡೆದುಕೊಂಡಿದ್ದ. ಹಣ ಕಳೆದು ಹೋದ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡು ಡೆತ್ ನೋಟ್ ಬರೆದಿಟ್ಟು ಮನೆಯ ಸಮೀಪದ ಬೆಟ್ಟದಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಸೋಷಿಯಲ್ ಮೀಡಿಯಾ ಕ್ರೇಜ್ : ಶೇ.95 ರಷ್ಟು ಹದಿಹರೆಯದವರೇ ಆನ್ ಲೈನ್ ಬಳಕೆ
ಬಂಟ್ವಾಳದಲ್ಲಿ ದಂಪತಿ ಆತ್ಮಹತ್ಯೆ ಯತ್ನ, ಓರ್ವ ಸಾವು :ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಕೊಡಾಜೆ ಸನಿಹದ ಬಾಕಿಲ ಎಂಬಲ್ಲಿ ಶನಿವಾರ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಪ್ರತಾಪ್ ಸಾವನ್ನಪ್ಪಿದ್ದಾರೆ. ಪತ್ನಿ ವೀಣಾ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಾಪ್ ಖಾಸಗಿ ಬಸ್ ಚಾಲಕರಾಗಿದ್ದು, ಯಾವ ಕಾರಣಕ್ಕೆ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದು ತನಿಖೆ ಬಳಿಕ ಗೊತ್ತಾಗಬೇಕಿದೆ. ನೇಣು ಬಿಗಿದುಕೊಂಡು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ದಂಪತಿಗೆ ಐದು ವರ್ಷದ ಅವಳಿ ಮಕ್ಕಳಿದ್ದಾರೆ. ಎದುರು ಮನೆಯಲ್ಲಿ ಆಟವಾಡುತ್ತಿದ್ದ ಮಕ್ಕಳು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ನೆರೆಮನೆಯವರಿಗೆ ವಿಷಯ ತಿಳಿಸಿದ್ದಾರೆ.