ಕರ್ನಾಟಕ

karnataka

ETV Bharat / state

ನಾಳೆ ಹೊರ ಬೀಳಲಿರುವ ಮತಪೆಟ್ಟಿಗೆಯಲ್ಲಿ ಭದ್ರವಾಗಿರುವ ಅಭ್ಯರ್ಥಿಗಳ ಭವಿಷ್ಯ - ವಿಧಾನಸಭೆ ಚುನವಣೆ

ಮತ ಎಣಿಕೆ ಇರುವುದರಿಂದ ಎಣಿಕೆ ಕೇಂದ್ರ ಸುತ್ತ 100 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಕೂಡ ಜಾರಿ ಮಾಡಲಾಗಿದೆ.

ಸ್ಟ್ರಾಂಗ್ ರೂಮ್​
ಸ್ಟ್ರಾಂಗ್ ರೂಮ್​

By

Published : May 12, 2023, 7:50 PM IST

ನಾಳೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗುತ್ತಿದೆ.

ಕಾರವಾರ (ಉತ್ತರ ಕನ್ನಡ) :ಜಿಲ್ಲೆಯ 6 ವಿಧಾನಸಭಾ ವ್ಯಾಪ್ತಿಯಲ್ಲಿ ಮೇ.10 ರಂದು ನಡೆದ ಮತದಾನದಲ್ಲಿ ಶೇ. 77.92 ರಷ್ಟು ಮತದಾನವಾಗಿದೆ. ಮತಯಂತ್ರಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ, ಸಣ್ಣಪುಟ್ಟ ಗಲಾಟೆ, ಮಳೆ ಆರ್ಭಟದ ನಡುವೆಯೂ ಶಾಂತಿಯುತ ಮತದಾನ ನಡೆದಿದ್ದು, ಮಳೆಯಿಂದಾಗಿ ಮತಪೆಟ್ಟಿಗೆಗಳು ಕುಮಟಾದ ಡಾ. ಎವಿ ಬಾಳಿಗಾ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಮ್​ಗಳಲ್ಲಿ ಭದ್ರಪಡಿಸಲಾಗಿದೆ.

ಇನ್ನು ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ರಾಜ್ಯದ ಎಲ್ಲಾ ಕಡೆ ಸೂಕ್ತ ಬಂದೋಬಸ್ತ್​ ಮಾಡಲಾಗಿದೆ. ಹೀಗಾಗಿ ಕುಮಟಾದ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಮ್​ಗಳಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಎಲ್ಲ ಸ್ಟ್ರಾಂಗ್ ರೂಮ್​ಗಳನ್ನು ಶೀಲ್ ಮಾಡಿ ಸ್ಥಳದಲ್ಲಿ ಪೊಲೀಸರು, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಮೂಲಕ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ ಕಾಲೇಜಿನ ಸುತ್ತ 100 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಕೂಡ ಜಾರಿ ಮಾಡಲಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಮತದಾನ :ಜಿಲ್ಲೆಯಲ್ಲಿ ಅತಿ ಹೆಚ್ಚು ಯಲ್ಲಾಪುರದಲ್ಲಿ ಶೇ.81.71 ರಷ್ಟು ಮತದಾನವಾಗಿದೆ. 1,82,356 ಮತದಾರರ ಪೈಕಿ 1,48,999 ಮಂದಿ ಮತದಾನ ಮಾಡಿದ್ದಾರೆ. ಶಿರಸಿಯಲ್ಲಿ ಶೇ. 78.85 ರಷ್ಟು ಮತದಾನವಾಗಿದ್ದು, 2,00,615 ಮತದಾರರ ಪೈಕಿ 1,58,192 ಮಂದಿ ಹಕ್ಕು ಚಲಾಯಿಸಿದ್ದಾರೆ. ಹಳಿಯಾಳದಲ್ಲಿ ಶೇ.78.48 ರಷ್ಟು ಮತದಾನವಾಗಿದ್ದು, 1,81,033 ಮತದಾರರ ಪೈಕಿ 1,42,069 ಮಂದಿ, ಭಟ್ಕಳದಲ್ಲಿ ಶೇ.77.73 ಮತದಾನವಾಗಿದ್ದು, 2,22,708 ಮತದಾರರ ಪೈಕಿ 1,73,100 ಮಂದಿ ಹಕ್ಕು ಚಲಾಯಿಸಿದ್ದಾರೆ.

ಕುಮಟಾದಲ್ಲಿ ಶೇ.77.66 ಮತದಾನವಾಗಿದ್ದು, 1,88,735 ಮತದಾರರ ಪೈಕಿ, 1,46,573 ಮಂದಿ ಹಾಗೂ ಕಾರವಾರದಲ್ಲಿ ಶೇ.73.86 ರಷ್ಟು ಮತದಾನವಾಗಿದ್ದು, 2,19,267 ಮತದಾರರ ಪೈಕಿ 1,61,949 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ ಮಹಿಳೆಯರು ಶೇ. 77.62, ಪುರುಷರು ಶೇ.78.21 ಹಾಗೀ ಇತರೆ ಶೇ.71.43 ರಷ್ಟು ಮತದಾನವಾಗಿದೆ.

ನೌಕಾನೆಲೆ ಮತಗಟ್ಟೆಯಲ್ಲಿ ಕೇವಲ 9 ಮತ :ಅರಗಾದ ಕದಂಬ ನೌಕಾನೆಲೆಯಲ್ಲಿರುವ ಮತಗಟ್ಟೆಯಲ್ಲಿ 265 ಮತದಾರರ ಪೈಕಿ ಕೇವಲ 9 ಮಂದಿ ಮಾತ್ರ ಮತದಾನ ಮಾಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿಯೇ ಅತಿ ಕಡಿಮೆ ಮತದಾನ ನಡೆದ ಮತಗಟ್ಟೆಯಾಗಿದೆ. ಸ್ಥಳೀಯವಾಗಿ ಮತದಾನ ಹಕ್ಕು ಹೊಂದಿದ ನೌಕಾನೆಲೆ ನೌಕರರಿಗೆ ಮತದಾನ ಮಾಡಲು ಅವಕಾಶಗಳು ಇತ್ತಾದರೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಇಲ್ಲಿ ಅತಿ ಕಡಿಮೆ ಮತದಾನವಾಗಿತ್ತು. ಇನ್ನು ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಬಜಾರ್ ಕಾರವಾರದಲ್ಲಿ 1011 ಮತದಾರರ ಪೈಕಿ 983 ಮಂದಿ ಮತದಾನ ಮಾಡಿದ್ದು, ಆ ಮೂಲಕ ಶೇ.97.23 ಮತದಾನವಾಗಿದೆ.

ಮತ ಏಣಿಕೆ ಹೇಗೆ? :6 ಕ್ಷೇತ್ರಗಳ ಎವಿಎಂ ಯಂತ್ರಗಳ ಮತ ಎಣಿಕೆಯನ್ನು 6 ಪ್ರತ್ಯೇಕ ಕೋಣೆಗಳಲ್ಲಿ ನಡೆಸಲಾಗುತ್ತದೆ. ಪ್ರತಿ ಕೋಣೆಯಲ್ಲಿ 12 ಟೇಬಲ್‌ಗಳಲ್ಲಿ ಮತ ಎಣಿಕೆ ಮಾಡಲಾಗುತ್ತದೆ. ಹಳಿಯಾಳ ಮತ್ತು ಕುಮಟಾ ಕ್ಷೇತ್ರಗಳಲ್ಲಿ ತಲಾ 215 ಮತಗಟ್ಟೆಗಳಿದ್ದು, 18 ಸುತ್ತಿನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ. ಕಾರವಾರ ಮತ್ತು ಶಿರಸಿ ಕ್ಷೇತ್ರಗಳಲ್ಲಿ ಕ್ರಮವಾಗಿ 262 ಮತ್ತು 264 ಮತಗಟ್ಟೆಗಳಿದ್ದು, 22 ಸುತ್ತಿನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ.

ಭಟ್ಕಳ ಮತ್ತು ಯಲ್ಲಾಪುರ ಕ್ಷೇತ್ರಗಳಲ್ಲಿ ಕ್ರಮವಾಗಿ 248 ಮತ್ತು 231 ಮತಗಟ್ಟೆಗಳಿದ್ದು, ಕ್ರಮವಾಗಿ 21 ಮತ್ತು 20 ಸುತ್ತಿನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ. ಇನ್ನು ಮೇ 11ರಂತೆ ಹಳಿಯಾಳದಿಂದ 795, ಕಾರವಾರ 2662, ಕುಮಟಾ 1896, ಭಟ್ಕಳ 1765, ಶಿರಸಿ 2284, ಯಲ್ಲಾಪುರದಿಂದ 1230 ಅಂಚೆ ಮತಪತ್ರಗಳು ಸ್ವೀಕೃತವಾಗಿದೆ. ಅಂಚೆ ಮತ ಪತ್ರಗಳನ್ನು ಪ್ರತ್ಯೇಕ ಕೋಣೆಗಳಲ್ಲಿ ಕ್ಷೇತ್ರವಾರು ಎಣಿಸಲಾಗುತ್ತಿದೆ.

700 ಅಧಿಕಾರಿ ಹಾಗೂ ಸಿಬ್ಬಂದಿ ಮತ ಏಣಿಕೆಗೆ :ಇವಿಎಂ ಮತ ಎಣಿಕೆ ಟೇಬಲ್‌ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು, ಒಬ್ಬರು ಮೈಕ್ರೋ ಒಬ್ಸರ್ವರ್ ಇರಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಮತಗಟ್ಟೆಗಳ ವಿವಿಪ್ಯಾಟ್‌ಗಳಲ್ಲಿ ಸಂಗ್ರಹವಾಗಿರುವ ವೋಟರ್ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುತ್ತದೆ. ಈ 5 ಮತಗಟ್ಟೆಗಳನ್ನು ರ‍್ಯಾಂಡಮ್ ಆಗಿ ಚುನಾವಣಾ ವೀಕ್ಷಕರು ಆಯ್ಕೆ ಮಾಡಲಿದ್ದಾರೆ. ಅಂದಾಜು 700 ಅಧಿಕಾರಿ, ಸಿಬ್ಬಂದಿಗಳು ಮತ ಎಣಿಕೆಯ ವಿವಿಧ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ :ನಾಳೆ ಕೌಂಟಿಂಗ್​ಗೆ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ: ಆರ್​ಪಿಡಿ ಕಾಲೇಜು ಸುತ್ತ ಪೊಲೀಸ್ ಸರ್ಪಗಾವಲು..

ABOUT THE AUTHOR

...view details