ಕರ್ನಾಟಕ

karnataka

ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಕೋಟ್ಯಂತರ ಅವ್ಯವಹಾರ: ಕೂಡಿಟ್ಟ ಹಣ ದೋಚಿದ ಮ್ಯಾನೇಜರ್

By

Published : Apr 26, 2022, 7:57 PM IST

ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಮಾತ್ರ ನಡೆಯುತ್ತಿದ್ದ ಹಣ ಅವ್ಯವಹಾರ ಇದೀಗ ರಾಷ್ಟ್ರೀಕೃತ ಬ್ಯಾಂಕಿನಲ್ಲೂ ನಡೆದಿರುವುದು ಗ್ರಾಹಕರನ್ನು ಆತಂಕಕ್ಕೀಡು ಮಾಡಿದೆ.

ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಕೋಟ್ಯಾಂತರ ಅವ್ಯವಹಾರ
ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಕೋಟ್ಯಾಂತರ ಅವ್ಯವಹಾರ

ಕಾರವಾರ: ಜನರು ತಾವು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣ, ಚಿನ್ನಾಭರಣ ಸುರಕ್ಷಿತವಾಗಿರಲಿ ಎಂದು ಜನರು ಬ್ಯಾಂಕ್​​ಗಳ ಮೊರೆ ಹೋಗ್ತಾರೆ. ಅದರಲ್ಲೂ ಯಾವುದೋ ಖಾಸಗಿ ಸಂಸ್ಥೆಗಿಂತ ರಾಷ್ಟ್ರೀಕೃತ ಬ್ಯಾಂಕುಗಳಲ್ಲೇ ನಗ-ನಗದು ಇಡುವುದೇ ಸುರಕ್ಷಿತ ಅನ್ನೋದು ಜನರ ಭಾವನೆ. ಆದ್ರೆ ಇಲ್ಲೊಂದು ಕಡೆ ರಾಷ್ಟ್ರೀಕೃತ ಬ್ಯಾಂಕಿನ ಮ್ಯಾನೇಜರ್‌ 1.5 ಕೋಟಿ ಹಣ ಗುಳುಂ ಮಾಡಿ ನಾಪತ್ತೆಯಾಗಿದ್ದಾನೆ.

ಬೇಲಿಯೇ ಎದ್ದು ಹೊಲ ಮೇಯ್ದಂತೆ ಅನ್ನೋ ಗಾದೆ ಮಾತಿದೆ. ಇದಕ್ಕೆ ನಿದರ್ಶನ ಎನ್ನುವಂತೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬ್ಯಾಂಕ್ ಮ್ಯಾನೇಜರ್‌ರೊಬ್ಬರು ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ. ಪಟ್ಟಣದ ಬಜಾರ್ ಎಸ್‌ಬಿಐ ಶಾಖೆಯಲ್ಲಿ ಇಂತಹದ್ದೊಂದು ಅವ್ಯವಹಾರ ನಡೆದಿರೋದು ಇದೀಗ ಬಯಲಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮ್ಯಾನೇಜರ್​ನಿಂದ ಬ್ಯಾಂಕ್​ಗೆ ವಂಚನೆ:ಅನೂಪ್ ದಿನಕರ ಪೈ ಎಂಬಾತ ಕಳೆದ 2019 ರಿಂದ 2022 ಏಪ್ರಿಲ್ 11ರ ವರೆಗೆ ಭಟ್ಕಳದ ಎಸ್‌ಬಿಐ ಬ್ಯಾಂಕ್‌ ಬಜಾರ್ ಶಾಖೆಯ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಆತ ಮ್ಯಾನೇಜರ್ ಹುದ್ದೆಯ ಸಸ್ಪೆನ್ಸ್ ಖಾತೆಯಿಂದ ಗ್ರಾಹಕರ ಖಾತೆಗೆ ಹಣವನ್ನು ವರ್ಗಾಯಿಸುವ ಮೂಲಕ ಬ್ಯಾಂಕಿನ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಂದರೆ ಬ್ಯಾಂಕಿನ ತುರ್ತು ವ್ಯವಹಾರಗಳಿಗಾಗಿ ಮ್ಯಾನೇಜರ್ ಬಳಿ ಸಸ್ಪೆನ್ಸ್ ಖಾತೆಯಲ್ಲಿ ಒಂದಷ್ಟು ಹಣವನ್ನು ಉಳಿಸಲಾಗಿರುತ್ತದೆ. ಅದನ್ನು ಬ್ಯಾಂಕಿನ ಕಾರ್ಯಗಳಿಗೆ ಮಾತ್ರ ಉಪಯೋಗಿಸಬೇಕು. ಆದರೆ ಈತ ಇದೇ ಹಣವನ್ನು ಗ್ರಾಹಕರ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದು, ಆ ಮೂಲಕ ಬ್ಯಾಂಕಿನ ಹಣವನ್ನ ದುರ್ಬಳಕೆ ಮಾಡಿದ್ದಾನೆ. ಇದೇ ರೀತಿ ಸುಮಾರು 1.5 ಕೋಟಿ ರೂಪಾಯಿ ಹಣ ಸಸ್ಪೆನ್ಸ್ ಖಾತೆಯಿಂದ ನಾಪತ್ತೆಯಾಗಿದ್ದು, ಬ್ಯಾಂಕಿನ ಆಡಿಟ್ ನಡೆದ ವೇಳೆ ಈತನ ಅವ್ಯವಹಾರ ಬಯಲಾಗಿದೆ.

ಇದನ್ನೂ ಓದಿ:ಪಿಎಸ್‌ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ ಸೇರಿ 6 ಆರೋಪಿಗಳಿಗೆ ಅರೆಸ್ಟ್ ವಾರೆಂಟ್ ಜಾರಿ

ಅನೂಪ್ ಪೈ ಅವ್ಯವಹಾರ ತಿಳಿಯುತ್ತಿದ್ದಂತೆ ಆತನನ್ನು ಏಪ್ರಿಲ್ 11ರಂದು ವಜಾಗೊಳಿಸಿ ನೂತನ ಮ್ಯಾನೇಜರ್‌ ನೇಮಕ ಮಾಡಲಾಗಿತ್ತು. ಇದೀಗ ಎಸ್‌ಬಿಐ ಬ್ಯಾಂಕ್‌ನ ನೂತನ ಮ್ಯಾನೇಜರ್ ಅನೂಪ್ ಪೈ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ. ಭಟ್ಕಳ ನಗರ ಠಾಣೆ ಪೊಲೀಸರು ಅನೂಪ್ ವಿರುದ್ಧ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಆಡಿಟ್ ವೇಳೆ ಆತನ ಕರ್ಮಕಾಂಡ ಬಯಲಾಗುತ್ತಿದ್ದಂತೆ ಆತ ಉಳಿದುಕೊಂಡಿದ್ದ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾನೆ ಎನ್ನಲಾಗ್ತಿದೆ. ಪೊಲೀಸರು ತಂಡ ರಚಿಸಿಕೊಂಡು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ರಾಷ್ಟ್ರೀಕೃತ ಬ್ಯಾಂಕೊಂದರಲ್ಲೇ ಈ ರೀತಿಯ ಅವ್ಯವಹಾರ ನಡೆದಿರುವುದು ಬ್ಯಾಂಕಿನ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಆತಂಕ ಮೂಡಿಸಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಕ್ರಮ ನಡೆಸಿದಾತನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ABOUT THE AUTHOR

...view details