ಕಾರವಾರ: ನಮ್ಮ ಗ್ರಾಮೀಣ ಹಬ್ಬಗಳು ವೈವಿಧ್ಯಮಯವಾಗಿರುತ್ತವೆ. ಅದರಲ್ಲೂ ಕರಾವಳಿ ಭಾಗದಲ್ಲಿ ನಡೆಯುವ ಹಬ್ಬ-ಹರಿದಿನಗಳಂತೂ ಒಂದಕ್ಕಿಂತ ಒಂದು ವಿಶಿಷ್ಟ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಬೇಸಿಗೆಯ ಕೊನೆಯಲ್ಲಿ ಆಚರಿಸುವ ಬಂಡಿಹಬ್ಬ ಎನ್ನುವ ವಿಶೇಷ ಜಾತ್ರಾ ಮಹೋತ್ಸವ ಎಲ್ಲರ ಗಮನ ಸೆಳೆಯುತ್ತದೆ.
ಅಂಕೋಲಾದ ಅತಿದೊಡ್ಡ ಶಾಂತದುರ್ಗಾ ದೇವಿಯ ಬಂಡಿಹಬ್ಬ ವಿಜೃಂಭಣೆಯಿಂದ ಜರುಗಿತು. ಸಾಂಪ್ರದಾಯಿಕ ವೈಶಿಷ್ಟತೆಯಿಂದ ಕೂಡಿರುವ ಈ ಹಬ್ಬದಲ್ಲಿ ಊರ ಹೊರಗಿದ್ದವರು ಊರಿಗೆ ಬರುತ್ತಾರೆ. ಹಬ್ಬದ ದಿನ ಸಂಜೆ ಇಲ್ಲಿನ ಕುಂಬಾರಕೇರಿಯ ಗುನಗರು ಕಲಶ ಹೊತ್ತು ಊರೂರು ಪ್ರವೇಶಿಸುತ್ತಾರೆ. ಗಲ್ಲಿಗಲ್ಲಿಗಳಲ್ಲಿ ನಿಂತ ಭಕ್ತರು ಕಲಶಕ್ಕೆ ಪೂಜೆ ಸಲ್ಲಿಸುವರು.