ಕಾರವಾರ:ಚುನಾವಣೆ ಸಂದರ್ಭದಲ್ಲಿ ಗಾಂಧೀಜಿ ಹತ್ಯೆ ಮಾಡಿದ ಗೋಡ್ಸೆ ಅವರನ್ನ ಸಮರ್ಥಿಸಿಕೊಂಡಿದ್ದ ಸಂಸದ ಅನಂತಕುಮಾರ್ ಹೆಗಡೆ, ಇದೀಗ ಅಧಿಕಾರದ ಆಸೆಗೆ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಗಾಂಧೀಜಿ ತತ್ತ್ವಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ವ್ಯಂಗ್ಯವಾಡಿದ್ದಾರೆ.
ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಸ್ನೋಟಿಕರ್, ನಾನು ಎಂದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿಲ್ಲ. ಅವರು ಹಿಂದುಳಿದ ವರ್ಗದವರು. ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅದರಂತೆ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗುರಿಯೊಂದಿಗೆ ಪ್ರತಿಯೊಬ್ಬರ ಅಭಿವೃದ್ಧಿಯ ಕನಸನ್ನು ಹೊಂದಿ ಗಾಂಧಿ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ.
ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಆದರೆ, ನಮ್ಮ ಸಂಸದ ಅನಂತಕುಮಾರ್ ಹೆಗಡೆ ಅವರು ಚುನಾವಣೆ ವೇಳೆ ಗಾಂಧೀಜಿ ಕೊಂದಿದ್ದ ನಾಥುರಾಮ್ ಗೋಡ್ಸೆ ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದರು. ಆದರೆ, ಯಾವಾಗ ದೇಶದಾದ್ಯಂತ ವಿರೋಧ ವ್ಯಕ್ತವಾಗತೊಡಗಿತೋ ಆಗ ತಮ್ಮ ಅಕೌಂಟ್ ಹ್ಯಾಕ್ ಆಗಿದೆ ಎಂದು ನಾಟಕವಾಡಿದ್ದರು. ಆದರೆ, ಹಿಂದೆ ಕೊಟ್ಟಿರುವ ಹೇಳಿಕೆಗಳು ಇಂದು ಗಾಂಧಿ ಸಂಕಲ್ಪ ಯಾತ್ರೆ ಮಾಡುತ್ತಿರುವ ಅನಂತ್ ಕುಮಾರ್ ಅವಲೋಕನ ಮಾಡಿಕೊಳ್ಳಬೇಕಿದೆ. ಕೇವಲ ಜಾತಿ ಧರ್ಮ ಒಡೆದು ಹಿಂದುತ್ವದ ಆಧಾರದ ಅಧಿಕಾರ ಹಿಡಿದಿರುವ ಬಗ್ಗೆ ಯೋಚಿಸಲಿ ಎಂದರು.
ಉತ್ತರಕನ್ನಡ ಜಿಲ್ಲೆಯಲ್ಲಿ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಜಿಲ್ಲೆಗೆ ಅನುಕೂಲವಾಗುವ ಒಂದೂ ಅಭಿವೃದ್ಧಿಯನ್ನು ಮಾಡಿಲ್ಲ. ಆದರೆ, ಇದೀಗ ಐದು ವರ್ಷ ಮಂತ್ರಿಗಿರಿ ಸಿಗಲಿ ಎಂದು ಅಮಿತ್ ಶಾ, ಪ್ರಧಾನಿ ಮೋದಿ ಅವರನ್ನು ಮೆಚ್ಚಿಸಲು ಈ ರೀತಿ ಗಾಂಧೀಜಿ ಸಂಕಲ್ಪ ಯಾತ್ರೆಗೆ ಮುಂದಾಗಿದ್ದಾರೆ. ಇಂತಹ ಕನಸು ಕಾಣದೇ ಗಾಂಧೀಜಿಯವರ ವಿಚಾರಗಳನ್ನು ಅಳವಡಿಸಿಕೊಳ್ಳುವ ಕೆಲಸ ಮಾಡಲಿ. ಅವರು ಬದಲಾವಣೆಯಾದರೆ ಜಿಲ್ಲೆಗೂ ಒಳ್ಳೆಯದಾಗಲಿದೆ, ನಮಗೂ ಒಳ್ಳೆಯದಾಗಲಿದೆ ಎಂದರು.