ಕರ್ನಾಟಕ

karnataka

ETV Bharat / state

ರಾಜ್ಯದಲ್ಲೇ ಮೊದಲ ಬಾರಿ ಯುವ ರೈತರಿಗಾಗಿ ವಿನೂತನ ಯೋಜನೆ... ಹೀಗೆ ಮದುವೆ ಆದ್ರೆ ಬಂಪರ್​​! - ಸಹಕಾರ ಸಂಘ

ವಿನೂತನ ಯೋಜನೆಯನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘ ರೈತರ ಅಭಿವೃದ್ಧಿಗಾಗಿ ಜಾರಿಗೆ ತಂದಿದೆ. ಇದರಿಂದ ಕೃಷಿಕ ಯುವಕರ ದೊಡ್ಡ ಸಮಸ್ಯೆ ಆಗಿರುವ ಮದುವೆಯ ಸಮಸ್ಯೆಯ ನಿವಾರಣೆ ಆಗಬಹುದು ಎಂಬುದು ಸಂಘದ ಆಶಯವಾಗಿದೆ.

ಯಲ್ಲಾಪುರ ತಾಲೂಕಿನ ಆನಗೋಡ

By

Published : Feb 6, 2019, 12:41 PM IST

ಶಿರಸಿ: ರೈತರಿಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆಯನ್ನು ಒಂದು ಪುಟ್ಟ ಹಳ್ಳಿಯ ಸೇವಾ ಸಹಕಾರ ಸಂಘ ಜಾರಿಗೆ ತರುತ್ತಿದ್ದು, ಇಲ್ಲಿ ರೈತ ಯುವಕರನ್ನು ಬೇರೆ ಊರಿನ ಯುವತಿ ವರಿಸಿದರೆ ಆ ಯುವತಿಗೆ ಸ್ವಸಹಾಯಸಂಘವೊಂದು 1 ಲಕ್ಷ ಹಣವನ್ನು ಆಕೆಯ ಹೆಸರಿನಲ್ಲಿ ಠೇವಣಿ ಇಡಲಿದೆ.

ಹೌದು, ಇಂತಹ ಒಂದು ವಿನೂತನ ಯೋಜನೆಯನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘ ರೈತರ ಅಭಿವೃದ್ಧಿಗಾಗಿ ಜಾರಿಗೆ ತಂದಿದೆ. ಇದರಿಂದ ಕೃಷಿಕ ಯುವಕರ ದೊಡ್ಡ ಸಮಸ್ಯೆ ಆಗಿರುವ ಮದುವೆಯ ಸಮಸ್ಯೆಯ ನಿವಾರಣೆ ಆಗಬಹುದು ಎಂಬುದು ಸಂಘದ ಆಶಯವಾಗಿದೆ.

ಮಲೆನಾಡು ಭಾಗದಲ್ಲಿ ಕೃಷಿಯಿಂದ ಇಂದಿನ ಯುವಕರು ವಿಮುಖರಾಗುತ್ತಿದ್ದಾರೆ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಅಥವಾ ಮೆಚ್ಚಿಕೊಂಡೇ ಯುವಕರು ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡರೆ ಮದುವೆಗೆ ಸಮಸ್ಯೆಯಾಗುತ್ತಿದೆ. ಕಾರಣ ಹಳ್ಳಿಯಲ್ಲಿರುವ ಕೃಷಿಕ ಯುವಕರನ್ನು ಯುವತಿಯರು ವರಿಸಲು ನಿರಾಕರಿಸುತಿದ್ದಾರೆ. ಇದರಿಂದಾಗಿ 40 ವರ್ಷ ದಾಟಿದರೂ ಮದುವೆಯಾಗದೆ ಹಲವರು ಕೃಷಿಯನ್ನು ಬಿಟ್ಟು ನಗರದತ್ತ ಮುಖ ಮಾಡುತಿದ್ದಾರೆ.

ಯಲ್ಲಾಪುರ ತಾಲೂಕಿನ ಆನಗೋಡ

ಈ ಸಮಸ್ಯೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆನಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಾಗಿದ್ದು, ಊರಿನಲ್ಲಿ 30ಕ್ಕೂ ಹೆಚ್ಚು ಜನ ಯುವಕರು ಮದುವೆಯಾಗದೆ ಬಹ್ಮಚಾರಿಗಳಾಗಿ ಉಳಿದುಕೊಂಡಿದ್ದಾರೆ. ಆದ್ದರಿಂದ ಸಮಸ್ಯೆಯನ್ನು ನೀಗಿಸಲು ಹಾಗೂ ರೈತಾಪಿ ಕೆಲಸಕ್ಕೆ ಯುವಕರಿಗೆ ಉತ್ತೇಜನ ನೀಡುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಆನಗೋಡು ಗ್ರಾಮದ ಸೇವಾ ಸಹಕಾರ ಸಂಘವು ತಮ್ಮ ಸಂಘದಲ್ಲಿ ವ್ಯವಹಾರ ಮಾಡುತ್ತಿರುವ ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಾರೋ ಆ ಹೆಣ್ಣಿನ ಹೆಸರಿನಲ್ಲಿ ಉಚಿತವಾಗಿ ಒಂದು ಲಕ್ಷ ರುಪಾಯಿ ಠೇವಣಿ ಹಣ ಇಡಲು ಮುಂದಾಗಿದೆ. ಈ ಹಣವನ್ನು ಆ ಊರಿನ ವರನನ್ನು ವರಿಸಿದ ವಧುವು ಮೂರು ವರ್ಷಗಳ ನಂತರ ಬಡ್ಡಿ ಸಮೇತ ತೆಗೆದುಕೊಳ್ಳಬಹುದಾಗಿದ್ದು, ಸಹಕಾರ ಸಂಘವು ರೈತರ ವಧು ಸಮಸ್ಯೆಗೆ ಈ ರೀತಿಯಾಗಿ ಸಹಕರಿಸಲು ಮುಂದಾಗಿದೆ.

ಆನಗೋಡ ಸೇವಾ ಸಹಕಾರ ಸಂಘವು ಎರಡು ಸಾವಿರ ರೈತ ಸದಸ್ಯರನ್ನು ಹೊಂದಿದೆ. 29 ಗ್ರಾಮಗಳ ರೈತರು ಈ ಸಂಘದಲ್ಲಿ ತಮ್ಮ ವ್ಯವಹಾರ ಮಾಡುತ್ತಿದ್ದು, ರೈತರಿಗಾಗಿ ಕೃಷಿ ಸಾಲದ ಹೊರತಾಗಿ ಅವರ ಉತ್ಪನ್ನಗಳಿಗೂ ಇಲ್ಲಿ ಮಾರುಕಟ್ಟೆ ಒದಗಿಸುತ್ತಿದೆ. ಹೀಗಾಗಿ ತಾಲೂಕಿನಲ್ಲಿಯೇ ಹೆಚ್ಚು ಲಾಭ ಹಾಗೂ ಉತ್ತಮ ವ್ಯವಹಾರ ನಡೆಸುತ್ತಿರುವ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ತಮ್ಮ ಹಳ್ಳಿಯ ರೈತರ ಮಕ್ಕಳು ಮದುವೆಯಾಗದೇ ಸಮಸ್ಯೆ ಅನುಭವಿಸುತ್ತಿರುವುದನ್ನು ಮನಗಂಡು ಹಾಗೂ ರೈತಾಪಿ ಕೆಲಸಕ್ಕೆ ಉತ್ತೇಜನದ ಜೊತೆ ಪ್ರೋತ್ಸಹಿಸಲು ಎಲ್ಲಾ ಸದಸ್ಯರ ಬೆಂಬಲ ಪಡೆದು ಈ ನಿಯಮವನ್ನು ಜಾರಿಗೆ ತರಲು ಸಂಬಂಧಪಟ್ಟ ಇಲಾಖೆಯ ಅನುಮೋದನೆಗಾಗಿ ಕಳುಹಿಸಲಾಗಿದೆ. ಬಹುತೇಕ ಅನುಮೋದನೆಗೊಳ್ಳುವ ಸಾಧ್ಯತೆಗಳಿದ್ದು, ಬರುವ ಮಾರ್ಚ್​ ತಿಂಗಳಲ್ಲಿ ಜಾರಿಗೆ ಬರಲಿದೆ. ಸಂಘ ತೆಗೆದುಕೊಂಡ ಈ ನಿಲುವಿಗೆ ರೈತರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ಒಂದು ಲಕ್ಷ ಠೇವಣಿಯನ್ನು ಉಚಿತವಾಗಿ ಇಡಲು ಈಗಾಗಲೇ ಮಾನದಂಡ ರೂಪಿಸಲಾಗಿದೆ. ಅದರಂತೆ ನಡೆದುಕೊಳ್ಳುವ ಸದಸ್ಯರಿಗೆ ಮಾತ್ರ ಈ ಅನುಕೂಲ ದೊರೆಯಲಿದೆ. ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಸಹಕಾರ ಸಂಘವೊಂದು ಈ ರೀತಿಯ ಕಾರ್ಯ ಮಾಡುತ್ತಿರುವುದು. ಈ ಕಾರ್ಯ ಯಶಸ್ವಿಯಾದಲ್ಲಿ ರಾಜ್ಯಾದ್ಯಂತ ಸರ್ಕಾರ ವಿಸ್ತರಿಸಿದರೆ ಕೃಷಿಯಿಂದ ವಿಮುಖರಾದ ಯುವಕರಿಗೆ ಆಸಕ್ತಿ ಮೂಡಬಹುದಾಗಿದೆ. ಒಟ್ಟಿನಲ್ಲಿ ಈ ಹಳ್ಳಿಯ ರೈತರ ಸಮಸ್ಯೆ ನೀಗಿಸಲು ಇಲ್ಲಿನ ಸಂಘ ತೆಗೆದುಕೊಂಡ ನಿಲುವು ಶ್ಲಾಘನೀಯವಾಗಿದೆ.

ABOUT THE AUTHOR

...view details