ಕಾರವಾರ: ಕೊರೊನಾ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರವಾರ-ಅಂಕೋಲಾ ಕ್ಷೇತ್ರಕ್ಕೆ ಶಾಸಕಿ ರೂಪಾಲಿ ನಾಯ್ಕ ನಾಲ್ಕು ಆ್ಯಂಬುಲೆನ್ಸ್ಗಳನ್ನು ನೀಡಿದ್ದರು. ಅದರಲ್ಲೂ ಎರಡು ಆ್ಯಂಬುಲೆನ್ಸ್ಗಳು ವೆಂಟಿಲೇಟರ್ ವ್ಯವಸ್ಥೆ ಹೊಂದಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಹೆಚ್ಚು ಅನುಕೂಲವಾಗುವ ಬಗ್ಗೆ ನಿರೀಕ್ಷೆ ಹೊಂದಲಾಗಿತ್ತು.
ಆದರೆ ತಿಂಗಳು ಕಳೆದರೂ ವಾಹನಗಳಿಗೆ ಸೂಕ್ತ ಸಿಬ್ಬಂದಿ ನಿಯೋಜನೆ ಮಾಡದ ಕಾರಣ ಆ್ಯಂಬುಲೆನ್ಸ್ಗಳು ನಿಂತಲ್ಲೇ ನಿಂತಿದ್ದು, ಸಂಕಷ್ಟದ ಸಮಯದಲ್ಲೂ ಪ್ರಯೋಜನಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಒಂದು. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ವ್ಯವಸ್ಥೆ ಇಲ್ಲದ ಕಾರಣ ಯಾವುದೇ ತುರ್ತು ಚಿಕಿತ್ಸೆಯ ಅಗತ್ಯವಿದ್ದರೆ ಜನ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಇಲ್ಲವೇ ಗೋವಾದ ಬಾಂಬೋಲಿ ಆಸ್ಪತ್ರೆಗೆ ತೆರಳಬೇಕಾಗಿದೆ.
ಪ್ರಯೋಜನಕ್ಕೆ ಬಾರದ ಆ್ಯಂಬುಲೆನ್ಸ್ ಕೊರೊನಾ ಸಂದರ್ಭದಲ್ಲಿ ರೋಗಿಗಳನ್ನು ಕರೆದೊಯ್ಯಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಾರವಾರ-ಅಂಕೋಲಾ ಕ್ಷೇತ್ರಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ರೂಪಾಲಿ ನಾಯ್ಕ ಕೋಟ್ಯಂತರ ರೂ. ವೆಚ್ಚದಲ್ಲಿ ನಾಲ್ಕು ಆ್ಯಂಬುಲೆನ್ಸ್ಗಳನ್ನು ನೀಡಿದ್ದರು.
ಆದರೆ ಈವರೆಗೂ ಅವುಗಳ ಪ್ರಯೋಜನ ಜನಸಾಮಾನ್ಯರಿಗೆ ಸಿಕ್ಕಿಲ್ಲ. ಅದರಲ್ಲಿಯೂ ವೆಂಟಿಲೇಟರ್ ಆ್ಯಂಬುಲೆನ್ಸ್ಗಳು ಇದುವರೆಗೂ ರಸ್ತೆಗೆ ಇಳಿಯದೆ ಮೂಲೆ ಸೇರಿವೆ ಎನ್ನುವ ಆರೋಪ ಕೇಳಿ ಬಂದಿದೆ. ಆ್ಯಂಬುಲೆನ್ಸ್ಗಳನ್ನು ನೀಡಿರುವ ಶಾಸಕರು, ಅವುಗಳ ನಿರ್ವಹಣೆಗೆ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಆ್ಯಂಬುಲೆನ್ಸ್ಗಳು ಜನರ ಉಪಯೋಗಕ್ಕೆ ಸಿಗುತ್ತಿಲ್ಲ. ಆದ್ದರಿಂದ ಆದಷ್ಟು ಬೇಗ ಆ್ಯಂಬುಲೆನ್ಸ್ಗಳಿಗೆ ಸಿಬ್ಬಂದಿ ನಿಯೋಜಿಸುವಂತೆ ಮಾಜಿ ಶಾಸಕ ಸತೀಶ್ ಸೈಲ್ ಒತ್ತಾಯಿಸಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ ತಂದಿರುವ ನಾಲ್ಕು ಆ್ಯಂಬುಲೆನ್ಸ್ಗಳ ಪೈಕಿ ವೆಂಟಿಲೇಟರ್ ಸಹಿತ ಒಂದು ಆ್ಯಂಬುಲೆನ್ಸ್ಅನ್ನು ಕಾರವಾರ ಹಾಗೂ ಇನ್ನೊಂದನ್ನು ಅಂಕೋಲಾ ಆಸ್ಪತ್ರೆಗೆ ನೀಡಲಾಗಿದೆ. ಇನ್ನುಳಿದ ಎರಡು ಆ್ಯಂಬುಲೆನ್ಸ್ಗಳ ಪೈಕಿ ಒಂದನ್ನು ಕಾರವಾರ ತಾಲೂಕಿನ ಗುಡ್ಡಗಾಡು ಗ್ರಾಮದ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇನ್ನೊಂದನ್ನು ಅಂಕೋಲಾ ತಾಲೂಕಿನ ರಾಮನಗುಳಿ ಗ್ರಾಮಕ್ಕೆ ನೀಡಲಾಗಿದೆ.
ಆ್ಯಂಬುಲೆನ್ಸ್ಗಳಿಗೆ ಸಿಬ್ಬಂದಿ ನಿಯೋಜಿಸ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ನಾಗರಜ ನಾಯ್ಕ, ಜಿಲ್ಲೆಯಲ್ಲಿ ಸೂಕ್ತ ಸಿಬ್ಬಂದಿ ಕೊರತೆ ಇದೆ. ಈ ಕಾರಣದಿಂದ ಆ್ಯಂಬುಲೆನ್ಸ್ಗಳು ರಸ್ತೆಗಿಳಿಯುವುದು ತಡವಾಗಿರಬಹುದು. ಆದರೆ ಸುಸಜ್ಜಿತ ಆಸ್ಪತ್ರೆಯಿಲ್ಲದ ಜಿಲ್ಲೆಗೆ ಅಗತ್ಯ ವೆಂಟಿಲೇಟರ್ ಸಹಿತ ಆ್ಯಂಬುಲೆನ್ಸ್ನೀಡಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದ್ದಾರೆ.
ಓದಿ : ಕಾರವಾರ ವ್ಯಾಪ್ತಿಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಪೋನ್ ಬಳಕೆ!