ಉಡುಪಿ: ಜಿಲ್ಲೆಯ ಬೈಂದೂರಿನಲ್ಲಿ ಎರಡು ದಿನದ ಹಿಂದೆ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರು ಶವವಾಗಿ ಪತ್ತೆಯಾಗಿದ್ದಾರೆ. ಮೀನುಗಾರರಾದ ಚರಣ್ ಖಾರ್ವಿ ಹಾಗೂ ಅಣ್ಣಪ್ಪ ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರು ಎಂದು ತಿಳಿದುಬಂದಿದೆ.
ಸೆ.17ರಂದು ಬೈಂದೂರು ತಾಲೂಕಿನ ತಾರಾಪತಿಯ ಚರಣ್ ಖಾರ್ವಿ ಎಂಬುವರಿಗೆ ಸೇರಿದ ಜಯಗುರೂಜಿ ಎಂಬ ಹೆಸರಿನ ದೋಣಿಯಲ್ಲಿ ಒಟ್ಟು 7 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ಸಂಜೆ ದಡಕ್ಕೆ ಹಿಂದಿರುಗುತ್ತಿದ್ದಾಗ ಅಲೆಗಳ ರಭಸಕ್ಕೆ ಸಿಲುಕಿದ್ದ ದೋಣಿ ಮಗುಚಿತ್ತು.
ಈ ವೇಳೆ ದೋಣಿಯಲ್ಲಿದ್ದ ವಿಜೇತ್, ಪ್ರವೀಣ, ಸಚಿನ್, ಸುಮಂತ, ವಾಸುದೇವ ಖಾರ್ವಿ ಈಜಿ ದಡ ಸೇರಿದ್ದರು. ಆದರೆ, ಚರಣ್ ಹಾಗೂ ಅಣ್ಣಪ್ಪ ನಾಪತ್ತೆಯಾಗಿದ್ದರು. ರಾತ್ರಿಯಿಂದ ಕರಾವಳಿ ಕಾವಲು ಪಡೆ ಸಿಬ್ಬಂದಿ ಇಬ್ಬರು ಮೀನುಗಾರರಿಗಾಗಿ ತೀವ್ರ ಶೋಧ ನಡೆಸಿದ್ದರು.
ಇದೀಗ ಇಬ್ಬರೂ ಮೀನುಗಾರರು ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ನಡೆದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಮೀನುಗಾರರ ಕುಟುಂಬಕ್ಕೆ ಸರ್ಕಾರದಿಂದ 6 ಲಕ್ಷ ಹಾಗೂ ವೈಯಕ್ತಿಕ ಪರಿಹಾರ ನೀಡುವ ಭರವಸೆ ನೀಡಿದರು. ಘಟನೆ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆ: ಸಮುದ್ರ ಮಧ್ಯೆ ಸಿಲುಕಿದ್ದ 11 ಮಂದಿ ಮೀನುಗಾರರ ರಕ್ಷಣೆ