ಉಡುಪಿ: ಅಪಹರಣವಾದ ಮಗುವನ್ನು ಕೇವಲ 12 ಗಂಟೆಯೊಳಗೆ ನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪೊಲೀಸರ ನೆರವಿನೊಂದಿಗೆ ಕುಮಟ ರೈಲ್ವೇ ನಿಲ್ದಾಣದಲ್ಲಿ ಮಗು ಸಹಿತ ಆರೋಪಿಯನ್ನು ಸೆರೆ ಹಿಡಿಯಲಾಗಿದ್ದು, ಮಕ್ಕಳ ಮಾರಾಟದ ಆತಂಕದಲ್ಲಿದ್ದ ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಭಾನುವಾರ ಬೆಳಗ್ಗೆ 10.30 ರ ಸುಮಾರಿಗೆ ನಗರದ ಕರಾವಳಿ ಬೈಪಾಸ್ ಬಳಿಯಿಂದ ಎರಡುವರೆ ವರ್ಷದ ಪುಟ್ಟ ಮಗು ಶಿವರಾಜ್ ಕಾಣೆಯಾಗಿದ್ದ. ಹೋಟೆಲ್ ಶಾರದಾ ಇಂಟರ್ ನ್ಯಾಷನಲ್ ಸಮೀಪದ ಶೆಡ್ನಲ್ಲಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ಉತ್ತರ ಕರ್ನಾಟಕ ಮೂಲದ ಭಾರತಿ ಎಂಬ ಮಹಿಳೆ ತನ್ನ ಮಗು ಕಾಣೆಯಾದ ಬಗ್ಗೆ ನಗರ ಠಾಣೆಗೆ ದೂರು ಕೊಟ್ಟಿದ್ದಳು.
ಘಟನೆ ಹಿನ್ನೆಲೆ: ಬಾಗಲಕೋಟೆ ಮೂಲದ ಕೂಲಿ ಕಾರ್ಮಿಕ ಪರಶುರಾಮ ಎಂಬಾತ ಈಕೆಯನ್ನು ಪರಿಚಯ ಮಾಡಿಕೊಂಡು, ಇವರ ಶೆಡ್ ಬಳಿಯೇ ಬಂದು ಮಲಗುತ್ತಿದ್ದ. ಭಾನುವಾರ ಬೆಳಗ್ಗೆ ಮಗುವಿಗೆ ತಿಂಡಿ ತಿನ್ನಿಸುವ ನೆಪ ಮಾಡಿ ಖಾಸಗಿ ಬಸ್ನಲ್ಲಿ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ. ಕರಾವಳಿ ಬೈಪಾಸ್ ಬಳಿ ಸಿಸಿಟಿವಿ ವಿಶುವಲ್ಸ್ನಲ್ಲಿ ಅಪಹರಣದ ದೃಶ್ಯ ಸೆರೆಯಾಗಿತ್ತು.
ಬಸ್ನವರಲ್ಲಿ ವಿಚಾರಿಸಿದಾಗ ಆತ, ಸಂತೆಕಟ್ಟೆ ಬಳಿ ಇಳಿದು ಹೋಗಿದ್ದು, ಭಟ್ಕಳ ಬಸ್ ಹತ್ತಿ ಹೋಗಿದ್ದಾನೆಂದು ಗೊತ್ತಾಯ್ತು. ತಕ್ಷಣವೇ ಈ ಕುರಿತು ಉತ್ತರ ಕನ್ನಡ ಪೊಲೀಸರನ್ನು ಅಲರ್ಟ್ ಮಾಡಿ, ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಪೋಟೋ ತೆಗೆದು ಕಳುಹಿಸಲಾಗಿತ್ತು. ನಾಕಾಬಂದಿ ಮಾಡಿದ ಪೊಲೀಸರು ನೈಟ್ ರೌಂಡ್ಸ್ ನಲ್ಲಿದ್ದಾಗ ಕುಮಟ ರೈಲ್ವೇ ನಿಲ್ದಾಣದಲ್ಲಿ ಬಟ್ಟೆಯಿಂದ ಸುತ್ತಿದ್ದ ಮಗುಸಹಿತ ಆರೋಪಿಯನ್ನು ಪತ್ತೆ ಮಾಡಿದ್ದಾರೆ.