ಉಡುಪಿ:ಶಾಲಾ ಶಿಕ್ಷಕರಿಲ್ಲದೆ ಅಥವಾ ಮಕ್ಕಳಿಲ್ಲದೆ ಬೀಗ ಹಾಕುವುದನ್ನು ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ ಉಡುಪಿ ಜಿಲ್ಲೆಯ ಸುಮಾರು 77 ಶಾಲೆಗಳಲ್ಲಿ ನೀರಿನ ಅಭಾವ ಉಂಟಾಗಿದ್ದು, ಜಿಲ್ಲೆಯ 11 ಶಾಲೆಗಳಿಗೆ ಆಫ್ ಡೇ ರಜೆ ಘೋಷಿಸಲಾಗಿದೆ.
ಕುಡಿಯುವ ನೀರಿಲ್ಲದೆ ಉಡುಪಿಯ 11 ಶಾಲೆಗಳಿಗೆ ಅರ್ಧ ದಿನ ರಜೆ!
ಬರದ ಕಾರಣ ಉಡುಪಿ ಜಿಲ್ಲೆಯ ಸುಮಾರು 77 ಶಾಲೆಗಳು ನೀರಿನ ಅಭಾವ ಎದುರಿಸುತ್ತಿದ್ದು, 11 ಶಾಲೆಗಳ ತರಗತಿಗಳನ್ನು ನೀರಿಲ್ಲದ ಕಾರಣ ಅರ್ಧ ದಿನಕ್ಕೆ ಮೊಟಕುಗೊಳಿಸಿ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ.
ಈ ಬೇಸಿಗೆಯಲ್ಲಿ ಉಡುಪಿಯಲ್ಲಿ ನೀರಿಲ್ಲ. ಇತಿಹಾಸದಲ್ಲೇ ಎಂದೂ ಕಾಣದ ಬರದ ಛಾಯೆ ಆವರಿಸಿದೆ. ಶಾಲಾ ಅಧ್ಯಾಪಕರು ದಿನಬೆಳಗಾದ್ರೆ ನೀರಿಗಾಗಿ ಬಾವಿಗಳನ್ನು ಹುಡುಕುವ ಸ್ಥಿತಿ ಬಂದಿದೆ. ಈ ಬಾರಿ 77 ಶಾಲೆಗಳು ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿವೆ. ಈ ಪೈಕಿ ಹನ್ನೊಂದು ಶಾಲೆಗಳು ತರಗತಿಯನ್ನು ಅರ್ಧ ದಿನಕ್ಕೆ ಮೊಟಕುಗೊಳಿಸಿವೆ. ಈ ವಿಚಾರ ತಿಳಿದ ಶಿಕ್ಷಣ ಇಲಾಖೆ ಯಾವುದೇ ಕಾರಣಕ್ಕೂ ಶಾಲೆಯನ್ನು ಮುಚ್ಚಬಾರದು ಎಂದು ಆದೇಶ ಮಾಡಿದೆ. ನೀರಿಲ್ಲ ಅಂದ್ರೆ ಮಕ್ಕಳಿಗೆ ಬಿಸಿಯೂಟ ಕೊಡೋದು ಹೇಗೆ? ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆ ಮಾಡೋದು ಹೇಗೆ? ಅನ್ನೋದು ಶಾಲಾ ಆಡಳಿತ ಮಂಡಳಿಗಳಿಗೆ ದೊಡ್ಡ ತಲೆನೋವಾಗಿದೆ.
ಉಡುಪಿ ನಗರದ ಜೀವನದಿ ಸ್ವರ್ಣಾ ಬತ್ತಿ ಹೋಗಿದೆ. ವಾರ್ಡ್ಗೆ ಒಂದು ಬಾರಿ, ಒಂದು ವಾರಗಳ ಕಾಲ ಮಾತ್ರ ಸರಬರಾಜು ಮಾಡುವಷ್ಟು ನೀರು ಸ್ಟಾಕ್ ಇದೆ. ಹಾಗಾಗಿ ಶಾಲೆಗಳಿಗೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ನಗರಸಭಾ ಕಮಿಷನರ್ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಎಲ್ಲಿಂದಲೋ ಬರುವ ಟ್ಯಾಂಕರ್ ನೀರು ಬಳಸಿ, ಮಕ್ಕಳ ಆರೋಗ್ಯ ಹದಗೆಟ್ರೆ ಏನು ಮಾಡೋದು ಅಂತ ಪೋಷಕರಿಗೆ, ಶಿಕ್ಷಕರಿಗೆ ಆತಂಕ ಉಂಟಾಗಿದೆ. ಟ್ಯಾಂಕರ್ ನೀರಿನ ಶುದ್ಧತೆಯನ್ನು ಪರಿಶೀಲಿಸುವುದು ಕೂಡಾ ಶಾಲೆಗಳಿಗೆ ದೊಡ್ಡ ತಲೆನೋವಾಗಿದೆ. ಇನ್ನೂ ಒಂದು ವಾರ ಕಾಲ ಮಳೆ ಬರೋದು ಡೌಟು. ಹಾಗಾಗಿ ಶಾಲಾ ಅವಧಿಯನ್ನು ಮೊಟಕುಗೊಳಿಸುವುದು ಅಥವಾ ಶಾಲೆಗಳಿಗೆ ರಜೆ ನೀಡೋದೇ ಉತ್ತಮ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.