ಉಡುಪಿ :ಆಕೆಯದ್ದು 12 ವರ್ಷಗಳ ಅಜ್ಞಾತವಾಸ. ಗಂಡ ಸಾವಿನ ಬಳಿಕ ಮಾನಸಿಕ ಸ್ಥಿಮಿತ ಕಳೆದುಕೊಂಡ ಉತ್ತರ ಭಾರತದ ಮಹಿಳೆ ಬಂದು ಸೇರಿದ್ದು ದಕ್ಷಿಣದ ಕರಾವಳಿಗೆ. ಕಾಲ ಕಳೆದು ಎಲ್ಲ ಸರಿಯಾದಾಗ ಆಕೆಗೆ ತೊಡಕಾಗಿದ್ದು ಭಾಷೆ. ಆಕೆಯ ಅಲ್ಪಸ್ವಲ್ಪ ನೆನಪು. ಆದರೂ, ಒಳ್ಳೇ ಕಾಲ ಕೂಡಿ ಬಂದು 12 ವರ್ಷಗಳ ನಂತರ ತಾಯಿ-ಮಗ ಒಂದಾದದ್ದೇ ರೋಚಕ.
ಮಗನನ್ನು ಮುದ್ದಾಡುತ್ತಿರುವ ತಾಯಿ, ಅಮ್ಮನನ್ನು ಬಿಗಿದಪ್ಪಿದ ಮಗ. ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ. 12 ವರ್ಷಗಳ ನಂತರ ತಾಯಿ-ಮಗ ಒಂದಾದ ಅದ್ಭುತ ಕ್ಷಣವಿದು. ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿ ಆಗಿದ್ದು ಉಡುಪಿ ಶಂಕರಪುರದ ವಿಶ್ವಾಸದ ಮನೆ.
ಇವರ ಹೆಸರು ಬೇಗಂ. ಉತ್ತರಭಾರತದ ಅಸ್ಸೋಂ ಮೂಲದ ಮಹಿಳೆ. 2007ರಲ್ಲಿ ಗಂಡನ ಸಾವಿನ ಬಳಿಕ ಬೇಗಂ ಮಾನಸಿವಾಗಿ ಕುಗ್ಗಿ ಹೋಗಿದ್ದರು. 2008ರಲ್ಲಿ ಮನೆಯಿಂದ ಹೊರ ಬಂದ ಆಕೆ ಊರೂರು ಅಲೆದು, 2009ರಲ್ಲಿ ಮಂಗಳೂರು ಸೇರಿದರು.
ಮಂಗಳೂರಿನ ಬೀದಿಯಲ್ಲಿ ಅಲೆದಾಡುತ್ತಿದ್ದ ಈಕೆಯನ್ನ ಗಮಸಿದವರೊಬ್ಬರು, ಉಡುಪಿ ಶಂಕರಪುರದಲ್ಲಿ ಇರುವ ವಿಶ್ವಾಸದ ಮನೆಯ ಸಂಸ್ಥಾಪಕ ಸುನೀಲ್ ಜಾನ್ ಡಿಸೋಜಾ ಅವರಿಗೆ ತಿಳಿಸಿದರು. ಬಳಿಕ ಸುನಿಲ್, ಬೇಗಂ ಅವರನ್ನು ತಮ್ಮ ವಿಶ್ವಾಸದ ಮನೆಗೆ ಕರೆತಂದು ಔಷಧೋಪಚಾರ ಮಾಡಿಸಿದರು.
ಬಳಿಕ ಗುಣಮುಖರಾದ ಬೇಗಂ, "ಐವರು ಮಕ್ಕಳು.. ದುಬ್ರಿಗೆ ಹೋಗಬೇಕು" ಅನ್ನೋದು ಬಿಟ್ಟರೆ ಹೆಚ್ಚು ಮಾತನಾಡುತ್ತಿರಲಿಲ್ಲ. ಬಂಗಾಳಿ ಭಾಷೆ ಬಿಟ್ಟರೆ ಹಿಂದಿ ಬರುತ್ತಿರಲಿಲ್ಲ. ಎಲ್ಲ ವಿಧದಲ್ಲೂ ಮನೆಯವರ ಸಂಪರ್ಕಕ್ಕೆ ಪ್ರಯತ್ನ ಪಟ್ಟರೂ ಆಕೆಯ ಮನೆಯವರನ್ನು ಸಂಪರ್ಕ ಮಾಡೋದು ಮಾತ್ರ ಕಷ್ಟವಾಗಿತ್ತು. ಸಂವಹನಕ್ಕೆ ಭಾಷೆಯೂ ದೊಡ್ಡ ತೊಡಕಾಗಿತ್ತು.
ಇತ್ತೀಚೆಗೆ ಮಣಿಪಾಲ್ KMC ವಿದ್ಯಾರ್ಥಿಗಳು, ಆಶ್ರಮಕ್ಕೆ ಭೇಟಿ ನೀಡಿದಾಗ ಆಕೆಯನ್ನ ಮಾತನಾಡಿಸಿ ಮಾಹಿತಿ ಸಂಗ್ರಹಿಸಿ, ವಿಳಾಸವನ್ನು ಪತ್ತೆ ಹಚ್ಚಿದರು. ಅಪೂರ್ವ ಕ್ಷಣಕ್ಕೆ ವಿದ್ಯಾರ್ಥಿಗಳು ಕೊಂಡಿ ಆಗಿದ್ದರು.
ಇದೀಗ ಬೇಗಂ ಅವರ ಐವರು ಮಕ್ಕಳಲ್ಲಿ ಎರಡನೇ ಮಗ ತಹಜ್ಜುದ್ದೀನ್ ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗಲು ಉಡುಪಿಗೆ ಬಂದಿದ್ದಾರೆ. ತಾಯಿ ನಮ್ಮನ್ನು ಬಿಟ್ಟು ಹೋಗುವಾಗ ನನಗೆ 12 ವರ್ಷ ಆಗಿತ್ತು. ಅಂದಿನಿಂದ ತಾಯಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದೆವು. ಆದರೆ ದೊರೆತಿರಲಿಲ್ಲ. ಕೊನೆಗೂ, ವಿಶ್ವಾಸದ ಮನೆ ತಾಯಿಯನ್ನು ನೀಡಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.