ತುಮಕೂರು: ದಿನದಿಂದ ದಿನಕ್ಕೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ, ರಾಯಚೂರು, ಯಾದಗಿರಿ, ಬಾಗಲಕೋಟೆ ಜಿಲ್ಲೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾಗಾಗಿ ಸಂತ್ರಸ್ತರಿಗೆ ನೆರವು ನೀಡಲು ಕಲ್ಪತರು ನಾಡಿನ ಮಹಿಳೆಯರು ಹಾಗೂ ನಾಗರಿಕರು ಮುಂದಾಗಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಅವಶ್ಯಕ ವಸ್ತುಗಳು ಹಾಗೂ ದಿನ ಉಪಯೋಗಿ ವಸ್ತುಗಳನ್ನು ನೀಡಲು ಮುಂದಾದ ಜನ ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟದಿಂದ ಸಂತ್ರಸ್ತರಾಗಿರುವವರ ಕಷ್ಟ ಕಂಡ ತುಮಕೂರಿನ ನಾಗರಿಕರು ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಬೇಕಾದ ಅವಶ್ಯಕ ವಸ್ತುಗಳು ಹಾಗೂ ದಿನ ಉಪಯೋಗಿ ವಸ್ತುಗಳನ್ನು ನೀಡಲು ಮುಂದಾಗಿದ್ದಾರೆ. ತುಮಕೂರಿನ ಮಹಾಲಕ್ಷ್ಮಿ ಮತ್ತು ಸಿದ್ದರಾಮೇಶ್ವರ ಬಡಾವಣೆ ಮಹಿಳೆಯರು ಹಾಗೂ ನಾಗರಿಕ ಹಿತ ರಕ್ಷಣಾ ಸಮಿತಿಯವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಎರಡು ಲಕ್ಷಕ್ಕೂ ಅಧಿಕ ಸಾಮಗ್ರಿ ಹಾಗೂ ಒಂದು ಲಕ್ಷ ನಗದು ಹಣವನ್ನು ಸಂಗ್ರಹಿಸಲಾಗಿದ್ದು, ಬಡಾವಣೆಯ ಮಹಿಳೆಯರು ಹಾಗೂ ಕುಟುಂಬದವರ ನೆರವಿನಿಂದ ಮೂರು ಸಾವಿರಕ್ಕೂ ಹೆಚ್ಚು ಚಪಾತಿ ಹಾಗೂ 25 ಕೆಜಿ ಚಟ್ನಿ ಪುಡಿಯನ್ನು ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ನೂರು ಹೊದಿಕೆಗಳು, ನೂರು ಟವೆಲ್, ಚಾಪೆ, ಸೀರೆ, ಲುಂಗಿ, ಪ್ಲಾಸ್ಟಿಕ್ ಬಕೆಟ್ಗಳು, ಅಕ್ಕಿ, ಬೇಳೆ, ಅಡುಗೆ ಎಣ್ಣೆ, ವಾಟರ್ ಬಾಟಲ್ ಸಂಗ್ರಹಿಸಲಾಗಿದೆ.
ಇವುಗಳನ್ನು ಶಾಸಕರ ಮೂಲಕ ನೆರೆ ಸಂತ್ರಸ್ತರಿಗೆ ತಲುಪಿಸಲಾಗುವುದು ಎಂದು ನಗರದ ಮಹಾಲಕ್ಷ್ಮಿ ಹಾಗೂ ಸಿದ್ದರಾಮೇಶ್ವರ ಮಹಿಳಾ ಸಂಘದ ಸದಸ್ಯೆ ಅನ್ನಪೂರ್ಣಮ್ಮ ತಿಳಿಸಿದರು.