ತುಮಕೂರು: ಜಿಲ್ಲೆಯಲ್ಲಿ ನಡೆಯಲಿರುವ ಮೊದಲ ಹಂತದ ಗ್ರಾ.ಪಂ. ಚುನಾವಣೆಯಲ್ಲಿ 2,786 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದುವರೆಗೂ ಕೇವಲ 1267 ಸ್ಥಾನಗಳಿಗೆ ಮಾತ್ರ ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನ ಬಾಕಿ ಇದ್ದು, 1519 ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಕೆಯಾಗಬೇಕಿದೆ.
ಜಿಲ್ಲೆಯಲ್ಲಿ ನಡೆಯಲಿರುವ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಈಗಾಗಲೇ ಡಿಸೆಂಬರ್ 7ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 11ರಂದು ಕಡೆ ದಿನವಾಗಿದೆ. ಮೊದಲ ಹಂತದಲ್ಲಿ 168 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
ಓದಿ:ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ 33 ಗ್ರಾಮಗಳಲ್ಲಿ ಗ್ರಾಪಂ ಚುನಾವಣೆ ಬಹಿಷ್ಕಾರ
ತುಮಕೂರು ತಾಲೂಕಿನ 41 ಗ್ರಾಮ ಪಂಚಾಯಿತಿಗಳ 746 ಸ್ಥಾನಗಳ ಪೈಕಿ ಇನ್ನೂ 400 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಗುಬ್ಬಿ ತಾಲೂಕಿನ 34 ಗ್ರಾಮ ಪಂಚಾಯಿತಿಗಳ 625 ಸ್ಥಾನಗಳಲ್ಲಿ 382 ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಕೆಯಾಗಬೇಕಿದೆ. ಕುಣಿಗಲ್ ತಾಲೂಕಿನ 36 ಗ್ರಾಮ ಪಂಚಾಯಿತಿಗಳ 495 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 155 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.
ಕೊರಟಗೆರೆ ತಾಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ 392 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದ್ರಲ್ಲಿ ಇನ್ನೂ 134 ಸ್ಥಾನಗಳಿಗೆ ಯಾರೂ ಉಮೇದುವಾರಿಕೆ ಸಲ್ಲಿಸಿಲ್ಲ. ಪಾವಗಡ ತಾಲೂಕಿನಲ್ಲಿ 33 ಗ್ರಾಮ ಪಂಚಾಯಿತಿಗಳಿದ್ದು, ಅದ್ರಲ್ಲಿ 526 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇನ್ನೂ 448 ಸ್ಥಾನಗಳಿಗೆ ಯಾರೂ ಸಹ ನಾಮಪತ್ರಗಳನ್ನು ಸಲ್ಲಿಸಿಲ್ಲ. ಒಟ್ಟಾರೆ ನಾಮಪತ್ರ ಸಲ್ಲಿಸಲು ಎರಡು ದಿನಗಳು ಬಾಕಿ ಇದ್ದು, ಎಲ್ಲಾ ಸದಸ್ಯ ಸ್ಥಾನಗಳಿಗೂ ಉಮೇದುವಾರಿಕೆ ಸಲ್ಲಿಕೆಯಾಗುವುದು ಅನುಮಾನವಾಗಿದೆ.