ತುಮಕೂರು: ಭಾರತ್ ಜೋಡೋ ಬಗ್ಗೆ ಕಾಂಗ್ರೆಸ್ ಪಶ್ಚಾತ್ತಾಪ ಪಡೆಬೇಕಿತ್ತು. ಪಿಎಫ್ಐ ನಿಷೇಧ ಹಾಗೂ ಆರ್ಟಿಕಲ್ 370ನ್ನು ರದ್ದು ಮಾಡುವ ಮೂಲಕ ನಾವು ನಿಜವಾಗಿ ಭಾರತವನ್ನು ಒಂದು ಮಾಡಿದ್ದೇವೆ. ಭಾರತ್ ಜೋಡೋ ಪಾದಯಾತ್ರೆ ಮೂಲಕ ಉತ್ತರ ಭಾರತಕ್ಕೆ ಹೋಗುವಷ್ಟರಲ್ಲಿ ಕಾಂಗ್ರೆಸ್ ಇರೋದೆ ಇಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಟಾಂಗ್ ನೀಡಿದರು.
ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ರಾಜಸ್ಥಾನ, ಬೇರೆ ಬೇರೆ ರಾಜ್ಯದ ಪರಿಸ್ಥಿತಿ ಏನಾಗಿದೆ ನೋಡಿ. ಭಾರತ್ ಜೋಡೋ ಬದಲು ಕಾಂಗ್ರೆಸ್ ಜೋಡೋ ಮಾಡಿ. ಪಾದಯಾತ್ರೆ ಜನಸ್ತೋಮ ನೋಡಿ ನಾವು ಭಯ ಪಡುವರಲ್ಲ. ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಅದಕ್ಕಿಂತ ಹೆಚ್ಚು ಜನ ಸೇರುತ್ತಾರೆ. ಯಾವುದೋ ಜನಸಂದಣಿ ನೋಡಿ ವಾತಾವರಣ ಬದಲಾಗುತ್ತದೆ ಎಂಬುದು ಸುಳ್ಳು. ಬಿಜೆಪಿ ಕಾರ್ಯಕರ್ತರ ಪಾರ್ಟಿ. ಪಕ್ಷವನ್ನು ಸಂಘಟನೆಗೊಳಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂಗೆ ಪ್ರಸ್ತಾವನೆ:2014ರಲ್ಲಿ ವಿದ್ಯುತ್ ದರ ಹೆಚ್ಚಳ ಬಗ್ಗೆ ಅಂದಿನ ಸರ್ಕಾರ ನಿರ್ಣಯ ತೆಗೆದುಕೊಂಡಿತ್ತು. ಎಲ್ಲಾ ಕಂಪನಿಗಳು ಕೆಆರ್‌ಸಿ ಮುಂದೆ ಅಪೀಲ್ ಹೋಗಿ ಅದರಂತೆ ದರ ಹೆಚ್ಚಳ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಚೇರಿಗಳಿಂದ ಪಾವತಿ ಆಗಬೇಕಾದ ವಿದ್ಯುತ್ ಬಿಲ್‌ಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಆರ್‌ಡಿಪಿಆರ್ ಇಲಾಖೆಯಿಂದ ಬಾಕಿ ಇರುವ ಬಿಲ್‌ನ್ನು ರಾಜ್ಯ ಸರ್ಕಾರದಿಂದ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.