ತುಮಕೂರು: 3100 ಎಂಸಿಎಫ್ಟಿ ನೀರು ಕುಣಿಗಲ್ ತಾಲೂಕಿಗೆ ನಿಗದಿಯಾಗಿದ್ದರೂ ಸಹ ಕಳೆದ 25-30 ವರ್ಷದಿಂದ ಹೇಮಾವತಿ ನೀರು ಹಂಚಿಕೆಯಲ್ಲಿ ಅನ್ಯಾಯವಾಗಿದೆ. ತುಮಕೂರು ಕಾಲುವೆ ನಿರ್ಮಾಣವಾದದ್ದು ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಸರಬರಾಜು ಮಾಡಲೆಂದು. ಆದರೆ ಅನೇಕ ತಾಲೂಕುಗಳು ಈ ಮಧ್ಯೆ ನೀರನ್ನು ಹರಿಸಿಕೊಳ್ಳುತ್ತಿವೆ. ಇದನ್ನು ತಡೆಗಟ್ಟುವಲ್ಲಿ ಪೊಲೀಸರು ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಆರೋಪಿಸಿದ್ದಾರೆ.
ಹೇಮಾವತಿ ನದಿ ನೀರು ಹಂಚಿಕೆಯಲ್ಲಿ ಕುಣಿಗಲ್ಗೆ ಅನ್ಯಾಯ: ಶಾಸಕ ರಂಗನಾಥ್ ಆರೋಪ
ಕುಣಿಗಲ್ ತಾಲೂಕಿಗೆ ಹೇಮಾವತಿ ನದಿ ನೀರು ಹಂಚಿಕೆ ಮಾಡುವಲ್ಲಿ ಅನ್ಯಾಯವಾಗಿದೆ ಎಂದು ಶಾಸಕ ಡಾ. ರಂಗನಾಥ್ ಆರೋಪಿಸಿದ್ದಾರೆ.
ಹೇಮಾವತಿ ಜಲಾಶಯದಿಂದ ಕುಣಿಗಲ್ ತಾಲೂಕಿಗೆ ಕೇವಲ 100 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತದೆ. ತುಮಕೂರು ಬ್ರಾಂಚ್ ಕಾಲುವೆಯಲ್ಲಿನ ನೀರು ಕುಣಿಗಲ್ ತಾಲೂಕಿಗೆ ಸಂಪೂರ್ಣವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ಸಂದರ್ಭದಲ್ಲಿ ಆರಂಭಿಸಲಾಗಿದ್ದ ಲಿಂಕ್ ಕಾಳುವೆಯನ್ನು ಬಿಜೆಪಿ ಸರ್ಕಾರ ತಡೆದಿದ್ದು, 614 ಕೋಟಿ ರೂ. ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಅದನ್ನು ಬಿಡುಗಡೆಗೊಳಿಸಬೇಕೆಂದು ಪ್ರತಿ ಸಭೆಯಲ್ಲೂ ಕೇಳಿಕೊಳ್ಳುತ್ತಿದ್ದೇನೆ ಎಂದರು.
ಲಿಂಕ್ ಕಾಲುವೆ ಮೂಲಕ ನೀರು ಹರಿಸಿದರೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಬದಲಾಗಿ ಕುಣಿಗಲ್ ತಾಲೂಕಿಗೆ ಸಹಕಾರಿಯಾಗಲಿದೆ. ಲಿಂಕ್ ಕಾಲುವೆ ಕಾಮಗಾರಿಗೆ ನಿಗದಿಯಾಗಿರುವ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.