ತುಮಕೂರು: ಹೆರಿಗೆ ನಂತರ ಬಾಣಂತಿ ಜೊತೆಗೆ ಹಸುಗೂಸನ್ನು ಊರಾಚೆಯ ಜಮೀನೊಂದರ ಗುಡಿಸಲಿನಲ್ಲಿ ಇಟ್ಟಿದ್ದರ ಪರಿಣಾಮ ನವಜಾತ ಶಿಶು ಸಾವನ್ನಪ್ಪಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾ. ನೂರುನ್ನೀಸಾ ಅವರು ಇಂದು ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿಗೆ ದಿಢೀರ್ ಭೇಟಿ ನೀಡಿ, ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಹಾಗೂ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೃತ ಮಗುವಿನ ಪೋಷಕರ ಅಹವಾಲು ಸ್ವೀಕರಿಸಿದ ನ್ಯಾಯಾಧೀಶರು, ಮಗು ಮೃತಪಟ್ಟ ನಂತರವೂ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯನ್ನೂ ಲೆಕ್ಕಿಸದೇ ತಾಯಿಯನ್ನು ಊರಾಚೆಯ ಗುಡಿಸಿಲಿನಲ್ಲಿ ಒಂಟಿಯಾಗಿ ಇರಿಸಲಾಗಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಗ್ರಾಮಸ್ಥರಿಗೆ ಕಾನೂನುಗಳ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ನಂತರ ಗುಡಿಸಲನ್ನು ಕೆಡವಿಸಿದ ಜಡ್ಜ್, ಬಾಣಂತಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದರು. ಅಷ್ಟೇ ಅಲ್ಲ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು.
ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅವಶ್ಯಕತೆ ಇರುವ ಬಾಣಂತಿ ಮತ್ತು ಮಗುವನ್ನು ಊರಾಚೆಯ ಗುಡಿಸಲಿನಲ್ಲಿಯೇ ಇರಿಸಿದ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವಾಗಿದೆ. ಋತುಚಕ್ರ ಹಾಗೂ ಬಾಣಂತನದ ಸಂದರ್ಭದಲ್ಲಿ ಹೆಣ್ಣಮಕ್ಕಳು ಅಗತ್ಯ ವಿಶ್ರಾಂತಿ ಪಡೆಯಬೇಕು ಎಂಬುದು ಹಿರಿಯರ ಆಶಯವಾಗಿತ್ತು. ಈ ವೇಳೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ ಆರೋಗ್ಯವಾಗಿರಲಿ ಎಂಬುದು ಈ ಆಚರಣೆಯ ಹಿಂದಿನ ಉದ್ದೇಶವಾಗಿತ್ತು. ಆದರೆ ಇಂದು ಈ ಆಚರಣೆ ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡಿದೆ. ಈ ಪರಿಣಾಮ ಇದು ಮೌಢ್ಯತೆಗೆ ಜಾರಿದ್ದು, ಮಗು ಪ್ರಾಣ ಕಳೆದುಕೊಳ್ಳುವಂತಾಗಿದೆ. ಬಾಣಂತಿಯನ್ನು ಕುಟುಂಬದ ಸದಸ್ಯರು ಹತ್ತಿರದಲ್ಲಿದ್ದು ನೋಡಿಕೊಳ್ಳಬೇಕು. ಹಸುಗೂಸಿನ ಆರೈಕೆ ಮಾಡಬೇಕು. ಅದನ್ನು ಬಿಟ್ಟು ಹೀಗೆ ಪ್ರತ್ಯೇಕವಾಗಿ ದೂರ ಇಟ್ಟರೆ ಅವರ ಆರೋಗ್ಯ ಕೆಟ್ಟು, ಈ ರೀತಿ ಸಾವಿಗೆ ಕಾರಣವಾಗುತ್ತದೆ. ಇಂತಹ ಆಚರಣೆ ನಾಗರಿಕ ಹಕ್ಕುಗಳ ರಕ್ಷಣಾ ಕಾಯಿದೆ -1955ರ ರೀತ್ಯಾ ಹಾಗೂ ಇತರ ಕಾನೂನು ನಿಯಮಗಳಿಗೆ ವಿರುದ್ಧವಾದದ್ದು ಎಂದು ಇಲ್ಲಿನ ಜನರಿಗೆ ನ್ಯಾಯಾಧೀಶರು ತಿಳಿ ಹೇಳಿದರು.
ಸ್ವಚ್ಛತೆಗೆ ಆದ್ಯತೆ: ಬೆಳ್ಳಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಾರ್ಡ್ಗಳು, ಔಷಧ ಉಗ್ರಾಣ ಕೊಠಡಿ, ಶೌಚಾಲಯಕ್ಕೆ ಭೇಟಿ ನೀಡಿದ ನ್ಯಾಯಾಧೀಶರು, ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ಇದೇ ವೇಳೆ ತಾಕೀತು ಮಾಡಿದರು.