ತುಮಕೂರು :ಕ್ವಾರಂಟೈನ್ ಮಾಡಿದ ಪ್ರದೇಶದಲ್ಲಿ ಪಾಸಿಟಿವ್ ಪ್ರಕರಣ ಬಂದಿವೆ. ಆ ಸ್ಥಳದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಕೇಂದ್ರವಿರೋದ್ರಿಂದ ಅದನ್ನು ಬದಲಾಯಿಸಿ, ಬೇರೆ ಪರೀಕ್ಷಾ ಕೇಂದ್ರವನ್ನು ಮಾಡಲು ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಸಿದ್ಧತೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸಚಿವ ಜೆ ಸಿ ಮಾಧುಸ್ವಾಮಿ ನೇತೃತ್ವದಲ್ಲಿ ಸಭೆ ಜೂನ್ 25ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಸರ್ಕಾರ ಸಕಲ ರೀತಿ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಸಿ ಮಾಧುಸ್ವಾಮಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿ ಕೈಗೊಂಡಿರುವಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 37,317 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಹೊರ ಜಿಲ್ಲೆಯ 67 ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕಾಮಾಕ್ಷಿ ತಿಳಿಸಿದರು.
ಸಚಿವ ಜೆ ಸಿ ಮಾಧುಸ್ವಾಮಿ ನೇತೃತ್ವದಲ್ಲಿ ಸಭೆ ಈ ವೇಳೆ ಮಾತನಾಡಿದ ಸಚಿವರು, ಒಂದು ವೇಳೆ ವಿದ್ಯಾರ್ಥಿಗಳು ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಬಾರದಿದ್ದರೆ ಆ ತಾಲೂಕಿನ ತಹಶೀಲ್ದಾರ್, ಬಿಇಒ ಮತ್ತು ನೋಡಲ್ ಅಧಿಕಾರಿಗಳು ವಿದ್ಯಾರ್ಥಿಗಳ ಪೋಷಕರಿಗೆ ಕರೆ ಮಾಡಿ, ಮಾಹಿತಿ ಪಡೆದುಕೊಂಡು ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆ ತರುವ ಕಾರ್ಯ ಮಾಡಬೇಕು. ಒಬ್ಬ ವಿದ್ಯಾರ್ಥಿಯೂ ತಾನು ಪರೀಕ್ಷೆ ಬರೆಯಲು ಆಗಲಿಲ್ಲ ಎಂದು ಹೇಳಬಾರದು. ಹೇಳಿದ್ರೆ ಅಲ್ಲಿನ ಅಧಿಕಾರಿಗಳು ಕಾರಣರಾಗುತ್ತಾರೆ ಎಂದರು.
ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳ ವಾಸಸ್ಥಳಕ್ಕೆ ದೂರ ಎನಿಸಿದರೆ ಪ್ರತಿದಿನ ಹೋಗಿ ಬರುವುದರಲ್ಲಿ ವಿದ್ಯಾರ್ಥಿಗಳಿಗೆ ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ಪರೀಕ್ಷಾ ಕೇಂದ್ರಕ್ಕೆ ಸಮೀಪವಿರುವ ಮೊರಾರ್ಜಿ ಶಾಲೆ ಅಥವಾ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳು ತಂಗುವ ವ್ಯವಸ್ಥೆ ಮಾಡಿ. ಇದರಿಂದ ವಿದ್ಯಾರ್ಥಿಗಳಿಗೆ ಓದಲು ಸಮಯ ಸಿಗುವಂತಾಗುತ್ತದೆ. ಜೊತೆಗೆ ಶಿಕ್ಷಕರು ಪರೀಕ್ಷೆಗೆ ಸಂಬಂಧಿಸಿದಂತೆ ತರಬೇತಿ ನೀಡಬಹುದು. ಈ ಬಗ್ಗೆ ಬಿಇಒ ಮತ್ತು ತಹಶೀಲ್ದಾರ್ಗಳು ಗಮನವಹಿಸಿ ಎಂದರು.
ಶಿರಾ ತಾಲೂಕಿನಲ್ಲಿ ಕ್ವಾರಂಟೈನ್ ಮಾಡಿರುವ ಶಾಲೆಯನ್ನು ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಿರುವುದಕ್ಕೆ ಬಿಇಒಓ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕ್ವಾರಂಟೈನ್ ಮಾಡಿದಂತಹ ಪ್ರದೇಶದಲ್ಲಿ ಪಾಸಿಟಿವ್ ಪ್ರಕರಣ ಬಂದಿವೆ. ಆ ಸ್ಥಳವನ್ನು ಬದಲಾಯಿಸಿ ಬೇರೆ ಪರೀಕ್ಷಾ ಕೇಂದ್ರವನ್ನು ಮಾಡಲು ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಸಿಇಒ ಶುಭಾ ಕಲ್ಯಾಣ್, ಡಿಹೆಚ್ಒ ನಾಗೇಂದ್ರಪ್ಪ, ತುಮಕೂರು ಶೈಕ್ಷಣಿಕ ಜಿಲ್ಲೆ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಎಲ್ಲಾ ತಾಲೂಕಿನ ತಹಶೀಲ್ದಾರ್ ಹಾಗೂ ಬಿಇಒಗಳು, ಕೆಎಸ್ಆರ್ಟಿಸಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.