ತುಮಕೂರು:ದೆವ್ವದ ಹೆಸರಿನ ಕುಚೇಷ್ಟೆಗೆ ಸ್ಥಳೀಯರು ಕಂಗಾಲಾಗಿರುವ ಘಟನೆ ತುಮಕೂರಿನ ತಿಪಟೂರು ತಾಲೂಕು ಮಡೆನೂರು ಭೋವಿ ಕಾಲೋನಿಯಲ್ಲಿ ನಡೆದಿದೆ. ಕಳೆದ ಏಳೆಂಟು ತಿಂಗಳಿಂದ ನಿರಂತರವಾಗಿ ಇಂಥ ಚೇಷ್ಟೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸಂಜೆ 6 ಗಂಟೆಯ ನಂತರ ಮನೆ ಮೇಲೆ ನಿರಂತರವಾಗಿ ಕಲ್ಲುಗಳು ಬೀಳುವುದು, ಶಿಳ್ಳೆ ಹೊಡೆದರೆ ಪ್ರತಿಯಾಗಿ ಶಿಳ್ಳೆ ಹೊಡೆಯುವುದು, ಮನೆ ಸುತ್ತಮುತ್ತಲ ಹುಲ್ಲಿನ ಬಣವೆಗೆ ಬೆಂಕಿ ಹಚ್ಚುವುದು ಎಂಬಿತ್ಯಾದಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಈವರೆಗೂ ಎರಡು ಬಾರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೊಬೈಲ್ ನಂಬರ್ ಹೇಳಿ ಕೇಕೆ ಹಾಕುವ ಘಟನೆಗಳೂ ನಡೆದಿವೆ. ಮೂರ್ನಾಲ್ಕು ದಿನದಿಂದ ಕತ್ತಲೆಯಿಂದ ಧ್ವನಿ ಕೇಳಿ ಬರುತ್ತಿದೆ. ನಾನು ಶಂಕರ್ ಉರುಫ್ ಇಡ್ಲಿ, ನಿಮ್ಮನ್ನೆಲ್ಲ ಕೊಲೆ ಮಾಡುತ್ತೇನೆ ಎನ್ನಲಾಗುತ್ತದೆ. 8 ತಿಂಗಳ ಹಿಂದಷ್ಟೇ ಇದೇ ಗ್ರಾಮದ ಶಂಕರ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆತ ಸಾವಿಗೀಡಾದ ಬಳಿಕ ದಾಯಾದಿಗಳ ಮೇಲೆ ಹಗೆ ಸಾಧಿಸಲು ದೆವ್ವದ ರೀತಿ ಕಾಡಲಾಗುತ್ತಿದೆ. ಶಂಕರನ ದಾಯಾದಿಗಳಾದ ಗಂಗಾಧರ್, ಮೂರ್ತಿ ಹಾಗೂ ಹೆಂಡತಿ ಲಾವಣ್ಯ ವಾಸವಿರುವ ಮನೆ ಮೇಲೆ ಕಲ್ಲುಗಳು ಬೀಳುತ್ತಿವೆ. ಮನೆ ಮುಂದಿರುವ ಕುರಿಗಳು ಕಣ್ಮರೆಯಾಗುತ್ತಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.