ತುಮಕೂರಿನಲ್ಲಿ ಮಳೆಗೆ ಅಪಾರ ಪ್ರಮಾಣದ ನಷ್ಟ ತುಮಕೂರು:ಕೊರಟಗೆರೆ ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ತಾಲೂಕಿನ ಹೊಳವನಹಳ್ಳಿ, ಅರಸಾಪುರ, ಕಾಶಾಪುರ, ಹಕ್ಕಿಪಿಕ್ಕಿ ಕಾಲೋನಿ ಗ್ರಾಮದ ಸುತ್ತಮುತ್ತ ಭಾರೀ ಗಾಳಿಯಿಂದಾಗಿ 8 ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ.
ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿ ಹೊಳವನಳ್ಳಿಯಲ್ಲಿ ಮೊಹಮ್ಮದ್ ಆಲಿ ಎಂಬುವರ ಮನೆಗೆ ಬೆಂಕಿ ಬಿದ್ದು ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಹೀಗಾಗಿ, ಹೊಳವನಹಳ್ಳಿ ವಿಭಾಗದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕೊರಟಗೆರೆ ತಹಶೀಲ್ದಾರ್ ಮುನಿಸ್ವಾಮಿ ರೆಡ್ಡಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ವಿದ್ಯುತ್ ಸ್ಪರ್ಶಿಸಿ ಹಸು ಸಾವು: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸೂಳೆಕೆರೆ ಗ್ರಾಮದಲ್ಲಿ ಶಾಂತಮ್ಮ ಎಂಬ ಮಹಿಳೆಗೆ ಸೇರಿದ ಹಸು ಸಾವನ್ನಪ್ಪಿದೆ. ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಕರೆಂಟ್ ಕಂಬದಿಂದ ವಿದ್ಯುತ್ ತಗುಲಿ ಹಸು ಮೃತಪಟ್ಟಿದೆ. ಸಾಲ ಮಾಡಿ ಆಕಳು ಖರೀದಿ ಮಾಡಲಾಗಿದ್ದು, ಇದೀಗ ಹಸು ಕಳೆದುಕೊಂಡ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ.
ಎರಡು ದಿನಗಳ ಹಿಂದೆ ಶಿರಸಿಯಲ್ಲಿ ಭಾರೀ ಮಳೆ:ಇನ್ನು ಕಳೆದ 2 ದಿನಗಳ ಹಿಂದೆ (ಮೇ. 25) ಶಿರಸಿಯಲ್ಲಿ ಸುರಿದ ಮುಂಗಾರು ಪೂರ್ವ ಭಾರೀ ಮಳೆಯಿಂದಾಗಿ 500ಕ್ಕೂ ಅಧಿಕ ಮರಗಳು ಧರೆಗುರುಳಿದ್ದು, 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸ್ಲಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡೇಬೈಲ್ನಲ್ಲಿ ಭಾರೀ ಗಾಳಿ ಮಳೆಯಿಂದಾಗಿ ಮರ - ಗಿಡಗಳು ನೆಲಕ್ಕುರುಳಿದ್ದವು. ಕೇವಲ ಎರಡು ನಿಮಿಷ ಬೀಸಿದ ಬಿರುಗಾಳಿಗೆ ಹಲವು ಮನೆಗಳ ಹಂಚು ಹಾರಿಹೋಗಿವೆ. ಅಡಿಕೆ ತೋಟ, ಬಾಳೆ ಗಿಡಗಳು, ತೆಂಗಿನ ಮರಗಳು ನೆಲಕ್ಕುರುಳಿದ್ದು, ರೈತರು ಕಂಗಲಾಗಿದ್ದಾರೆ. ಹಾಗೆಯೇ, ಸಮೀಪದಲ್ಲೇ ಇರುವ ಅರಣ್ಯದ ಅರ್ಧದಷ್ಟು ಮರ - ಗಿಡಗಳು ನಾಶವಾಗಿವೆ. ಹಿಂದೆಂದೂ ಕಾಣದ ರೀತಿಯಲ್ಲಿ ಬೀಸಿದ ಬಿರುಗಾಳಿಯಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ.
ಇದನ್ನೂ ಓದಿ :ಶಿರಸಿಯಲ್ಲಿ ಗಾಳಿ ಮಳೆಗೆ ಧರೆಗುರುಳಿದ ನೂರಾರು ಮರಗಳು: 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಕಳೆದ ಮೇ 24 ರಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸುರಿದ ಮಳೆ ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡಿತ್ತು. ಮಳೆ ಜೊತೆ ರಭಸವಾಗಿ ಗಾಳಿ ಬೀಸಿದಹಿನ್ನೆಲೆ ಕಾಡಾಪೂರ ಗ್ರಾಮದಲ್ಲಿ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿತ್ತು. ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಹೋಟೆಲ್ ಮೇಲೆ ಬೃಹತ್ತಾದ ಮರ ಬಿದ್ದು ಕಟ್ಟಡದ ಸಂಪೂರ್ಣ ಜಖಂಗೊಂಡಿತ್ತು. ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಮಳೆ ಜೊತೆ ಗಾಳಿ ಬೀಸಿದ ಪರಿಣಾಮ 6 ಮನೆಗಳ ಮೇಲ್ಛಾವಣಿ ಹಾರಿ ಹೋಗಿತ್ತು. ಬಳಿಕ, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿ ಸಂಭವಿಸಿದ ವರದಿಯನ್ನು ತಾಲೂಕು ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದರು.
ಇದನ್ನೂ ಓದಿ :ಚಿಕ್ಕೋಡಿಯಲ್ಲಿ ಮಳೆ ಅವಾಂತರ: ಗಾಳಿ ರಭಸಕ್ಕೆ ಹಾರಿಹೋದ ಮೇಲ್ಛಾವಣಿ