ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತುಮಕೂರು:ಬಿಬಿಎಂಪಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕಾಣಿಸಿಕೊಂಡ ವಿಚಾರಕ್ಕೆ ಸಂಬಂಧಪಟ್ಟಂತೆ ಯಾರು ಯಾವ ದೂರು ಬೇಕಾದರೂ ಕೊಡಲಿ. ನಾನು ಸಿಟಿ ರೌಂಡ್ಸ್ಗೆ ಹೋಗಬೇಕಾಗಿತ್ತು. ಅವರು ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದರು. ನಾನು ಹಾಗು ಸುರ್ಜೇವಾಲ ಇಬ್ಬರೂ ಕಾಫಿ ಕುಡಿಯಲು ಕುಳಿತುಕೊಂಡಿದ್ವಿ ಅಷ್ಟೇ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಡಿಎಯಲ್ಲಿ ಒಂದು ಮಿಟಿಂಗ್ ಮುಗಿಸಿಕೊಂಡು ಹೋಗೋಣ ಎಂದು ನಿರ್ಧಾರ ಮಾಡಿದ್ವಿ. ಅದನ್ನು ಬಿಟ್ಟರೆ ಯಾವ ಅಧಿಕಾರಿಗಳಿಗೂ ಸುರ್ಜೇವಾಲಗೂ ಸಂಬಂಧವಿಲ್ಲ. ನಾವುಂಟು, ಸುರ್ಜೇವಾಲ ಉಂಟು, ಹೋಟ್ಲು ಉಂಟು, ಕಾಫಿ ಉಂಟು. ಯಾರೂ ಮೀಟಿಂಗ್ ಕರೆದಿರಲಿಲ್ಲ, ನಾವು ಮೀಟಿಂಗ್ ಮಾಡಿಯೇ ಇಲ್ಲ ಎಂದರು.
ಬಿಜೆಪಿಯವರು ದೂರನ್ನು ರಾಜ್ಯಪಾಲರಿಗೆ ಬೇಕಾದರೆ ಕೊಡಲಿ, ಇನ್ಯಾರಿಗೆ ಬೇಕಾದರೂ ಕೊಡಲಿ. ಇಂಥ ಮೀಟಿಂಗ್‌ಗಳು ಬಿಜೆಪಿ ಅವರು ಎಷ್ಟು ಮಾಡಿದ್ದಾರೆ ಅನ್ನೋದು ನಮ್ಮತ್ರನೂ ಪಟ್ಟಿ ಇದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು. ಪಾಪ ಜಮೀರ್ ಅಹ್ಮದ್ ಖುಷಿಗೆ ಒಂದು ಸಭೆ ಮಾಡಿದ್ದೀವಿ ಎಂದು ಹೇಳಿಕೊಂಡು, ಫೋಟೋ ಹಂಚಿಕೊಂಡಿದ್ದಾರೆ. ನಾನು ಯಾವುದೇ ಮೀಟಿಂಗ್ ಮಾಡಿಲ್ಲ. ನನ್ನ ಮೀಟಿಂಗ್ ಏನಿದ್ದರೂ ಬಿಡಿಎಯಲ್ಲಿ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆ ರಾಜಕಾರಣದ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಅವರ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ, ಅವರು ಏನು ಬೇಕಾದರೂ ಮಾತಾಡಿಕೊಳ್ಳಲಿ, ಅದು ಅವರ ಪಾರ್ಟಿಗೆ ಬಿಟ್ಟಿದ್ದು ಎಂದು ತಿಳಿಸಿದರು. ನಾನು ಸಿಎಂ ಆಗೋದನ್ನು ಪಕ್ಷದವರೇ ತಪ್ಪಿಸಿದ್ರು ಎಂದು ಗೃಹ ಸಚಿವ ಪರಮೇಶ್ವರ ಹೇಳಿಕೆ ಕುರಿತು ಮಾತನಾಡಿ, ಅವರ ಅಭಿಪ್ರಾಯ ಏನಿದೆಯೋ ಅದನ್ನು ಅವರ ಬಳಿಯೇ ಚರ್ಚೆ ಮಾಡಿ ಹೇಳಿ ಎಂದು ನುಣುಚಿಕೊಂಡರು.
ಪಾವಗಡ ಸೋಲಾರ್ ಪಾರ್ಕ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡುತ್ತಾ, ಸೋಲಾರ್ ಪಾರ್ಕ್ ಸರ್ಕಾರದ್ದು. ಪ್ರೈವೇಟ್ನವರು ಬಂದು ಜಾಗ ತೆಗೆದುಕೊಂಡಿದ್ದಾರೆ. ಅವರು ಸ್ಥಳೀಯರಿಗೆ ಎಷ್ಟು ಉದ್ಯೋಗ ಕೊಡಬೇಕೋ ಕೊಟ್ಟಿದ್ದಾರೆ. ಅದಕ್ಕೆ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಸಾಹೇಬರ ಯೋಜನೆ ಇದೆ. ಇಲ್ಲಿಯೇ ಸ್ಕಿಲ್ ಡೆವಲಪ್ಮೆಂಟ್ ಟ್ರೈನಿಂಗ್ ಸೆಂಟರ್ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆ ಸ್ಕಿಲ್ ಡೆವಲಪ್ಮೆಂಟ್ ಆಗಲಿ, ಇಲ್ಲಿ ನಮ್ಮ ಜನರಿಗೆ ಟೆಕ್ನಿಕಲಿ ತಯಾರು ಮಾಡೋಣ ಆಮೇಲೆ ಉದ್ಯೋಗ ಸಿಗುತ್ತದೆ ಎಂದರು.
ಪಾವಗಡ ಸೋಲಾರ್ ಪಾರ್ಕ್‌ನಲ್ಲಿ ಶಕ್ತಿ ಸ್ಥಳಕ್ಕೆ ಭೇಟಿ ಕೊಡಲು ಬಂದಿದ್ದೇವೆ. ಹೆಲಿಕಾಪ್ಟರ್ನಲ್ಲಿ ಎಲ್ಲವನ್ನೂ ಗಮನಿಸಿದ್ವಿ. ನಮ್ಮೆಲ್ಲ ರೈತರು ಸಮಧಾನಕರವಾಗಿದ್ದಾರೆ. ಅಗ್ರಿಮೆಂಟ್‌ನಂತೆ ಹಣ ಅವರ ಖಾತೆಗೆ ಹೋಗುತ್ತಿದೆ. ಪ್ರತಿ ವರ್ಷ 25 ಸಾವಿರ ಬಾಡಿಗೆ ಪಡೆಯುತ್ತಿದ್ದಾರೆ. ವಿಶ್ವದಲ್ಲೇ ನಂಬರ್ 1 ಇತ್ತು, ಈಗ ರಾಜಸ್ಥಾನದ ನಡುವೆ ಪೈಪೋಟಿ ಇದೆ. 10 ಸಾವಿರ ಎಕರೆಗೆ ಸೋಲಾರ್ ಪಾರ್ಕ್ ವಿಸ್ತರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಹಿಂದಿನ ನಿಯಮದಂತೆ ರೈತರು ಮುಂದೆ ಬಂದರೆ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುತ್ತೇವೆ. ರಾಜ್ಯದ ಉದ್ದಲಕ್ಕೂ ಕುಸುಮ ಯೋಜನೆ ಮಾಡುತ್ತಿದ್ದೇವೆ. ರೈತರ ಪಂಪ್ ಸೆಟ್‌ಗೆ ಅವರೇ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದೇವೆ ಎಂದು ಡಿಕೆಶಿ ವಿವರಿಸಿದರು.
ಇದನ್ನೂ ಓದಿ:DK Shivakumar: ಪಾವಗಡ ಸೋಲಾರ್ ಪಾರ್ಕ್ಗೆ ಭೇಟಿ, ರೈತರೊಂದಿಗೆ ಸಂವಾದ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್