ತುಮಕೂರು: ಜಿಲ್ಲೆಯಲ್ಲಿ ನವಜಾತ ಅನಾಥ ಶಿಶುಗಳು ಪತ್ತೆಯಾಗುತ್ತಿದ್ದು ಕಳೆದೊಂದು ವರ್ಷದಿಂದ ಇದುವರೆಗೂ 35 ಶಿಶುಗಳು ಮಕ್ಕಳ ಕಲ್ಯಾಣ ಸಮಿತಿಯ ಕೈಸೇರಿವೆ.
ನವಜಾತ ಶಿಶುಗಳನ್ನು ಕರುಣೆಯಿಲ್ಲದ ಪಾಪಿಗಳು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದು ಸುಮಾರು 20 ಶಿಶುಗಳು ರಸ್ತೆ ಬದಿ, ಪೊದೆಗಳಲ್ಲಿ, ಹೊಲ ಗದ್ದೆಗಳಲ್ಲಿ ಪತ್ತೆಯಾಗಿವೆ.
ಇನ್ನು ಅನೈತಿಕ ಸಂಬಂಧ , ಹೆಣ್ಣು ಶಿಶುಗಳ ಸಂಖ್ಯೆ ಕುಟುಂಬದಲ್ಲಿ ಜಾಸ್ತಿ ಇದೆ ಎಂಬ ವಿವಿಧ ಕಾರಣಗಳಿಂದ 15 ಶಿಶುಗಳನ್ನು ಪೋಷಕರೇ ಸ್ವತಃ ಬಂದು ಮಕ್ಕಳ ಕಲ್ಯಾಣ ಸಮಿತಿಗೆ ಸುಪರ್ದಿಗೆ ಕೊಟ್ಟು ಹೋಗಿದ್ದಾರೆ.
ಮತ್ತೊಂದು ಆಘಾತಕಾರಿ ಅಂಶ ಎಂದರೆ ಈ ವರ್ಷ ಮಕ್ಕಳ ಕಲ್ಯಾಣ ಸಮಿತಿಯ ಬಳಿ ಇರುವ 35 ಅನಾಥ ಶಿಶುಗಳ ಪೈಕಿ 25 ಶಿಶುಗಳು ಹೆಣ್ಣುಗಳಾಗಿವೆ. ಇದನ್ನು ಗಮನಿಸಿದರೆ ಇಂದಿಗೂ ಕೂಡ ಸಮಾಜದಲ್ಲಿ ಹೆಣ್ಣು ಶಿಶುಗಳ ಬಗ್ಗೆ ಇರುವ ತಾತ್ಸಾರ ಮನೋಭಾವನೆ ಬೆಳಕಿಗೆ ಬರುತ್ತದೆ.
ಮನೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿ ಇದೆ ಎಂಬ ಉದ್ದೇಶದಿಂದ ನೀಡುತ್ತಿರುವುದಾಗಿ ಸಮಿತಿಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.
ಇನ್ನು ಈ ರೀತಿ ಶಿಶುಗಳನ್ನು ಅನಾಥವಾಗಿ ಬಿಸಾಡಿ ಹೋಗುತ್ತಿರುವವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತದೆ.