ಸೈದಾಪುರ ಹತ್ತಿ ಖರೀದಿ ಕೇಂದ್ರಕ್ಕೆ ಶಾಸಕ ನಾಗನಗೌಡ ಕಂದಕೂರ ಚಾಲನೆ - Yadagiri cotton trading center inauguration
ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಯಂತ್ರೋಪಕರಗಳ ಖರೀದಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಲಾಭ ಪಡೆದುಕೊಳ್ಳಿ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಗುರುಮಠಕಲ್: ಸರ್ಕಾರ ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಸಲಹೆ ನೀಡಿದರು.
ತಾಲೂಕಿನ ಸೈದಾಪುರದ ಎಸ್.ಕೆ. ಇಂಡಸ್ಟ್ರೀಸ್ ಭಾರತೀಯ ಹತ್ತಿ ನಿಗಮ(ಸಿಸಿಐ) ವತಿಯಿಂದ ಆರಂಭಿಸಲಾದ ಹತ್ತಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಂತ್ರಿಕ ಕಾರಣಗಳಿಂದ ಕಳೆದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿಯೇ ಆರಂಭಿಸಬೇಕಾದ ಹತ್ತಿ ಖರೀದಿ ಕೇಂದ್ರವನ್ನು ಇದೀಗ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ವಿಳಂಬವಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಯಂತ್ರೋಪಕರಗಳು ಸೇರಿದಂತೆ ಫಸಲಿಗೆ ಉತ್ತಮ ಬೆಲೆ ನೀಡುವುದು ಅತ್ಯವಶ್ಯವಾಗಿದೆ. ಇದಕ್ಕಾಗಿ ಅಧಿಕಾರಿಗಳು ಮುತುವರ್ಜಿ ವಹಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.
ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ನಿರ್ದೇಶಕ ಭೀಮರಾಯ ಕಲ್ಲೂರು ಮಾತನಾಡಿ, ಭಾರತೀಯ ಹತ್ತಿ ನಿಗಮ (ಸಿಸಿಐ) ವತಿಯಿಂದ ರೈತರ ಹತ್ತಿಯನ್ನು ನೇರವಾಗಿ ಖರೀದಿ ಮಾಡಲಾಗುತ್ತದೆ. ಈಗಾಗಲೇ ಜಿಲ್ಲೆಯ ನಾಲ್ಕು ಕಡೆ ಹತ್ತಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ಪ್ರತಿ ಕ್ವಿಂಟಾಲ್ ಹತ್ತಿಗೆ ಗುಣಮಟ್ಟ ಆಧರಿಸಿ 5325 ರೂ.ನಿಂದ 5550 ರೂ.ವರೆಗೆ ದರ ನಿಗದಿಪಡಿಸಲಾಗಿದೆ ಎಂದರು.