ಸೂಕ್ತ ಮುಂಜಾಗರೂಕತೆ ನಡುವೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ: ಭಯದಲ್ಲಿದ್ದ ವಿದ್ಯಾರ್ಥಿಗಳು ಕೂಲ್ - ಪಿಯುಸಿ ಪರೀಕ್ಷೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮದೊಂದಿಗೆ ಯಾವುದೇ ಅಡಚಣೆಗಳಿಲ್ಲದೆ ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದಿದ್ದಾರೆ.
ಬೆಳ್ತಂಗಡಿ: ಕೋವಿಡ್-19 ಭೀತಿಯ ನಡುವೆ ಮುಂಜಾಗ್ರತಾ ಕ್ರಮದೊಂದಿಗೆ ಸರಕಾರ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಸಿದ್ದು, ತಾಲೂಕಿನ 4 ಪರೀಕ್ಷೆ ಕೇಂದ್ರಗಳಲ್ಲಿ 2626 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 54 ಮಂದಿ ಗೈರಾಗಿದ್ದಾರೆ.
ಬೆಳ್ತಂಗಡಿ ಹಳೆಕೋಟೆ ವಾಣಿ ಪಿಯು ಕಾಲೇಜು, ಉಜಿರೆ ಎಸ್‌ಡಿಎಂ ಪಿಯು ಕಾಲೇಜು, ಬೆಳ್ತಂಗಡಿ ಜ್ಯೂನಿಯರ್ ಕಾಲೇಜು ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಬೇಕಾದ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.
ಪರೀಕ್ಷೆ ಸಮಯಕ್ಕಿಂತ ಮುಂಚಿತವಾಗಿ ಉಜಿರೆ ಕಾಲೇಜಿನಲ್ಲಿ ಬೆಳಗ್ಗೆ 7-30 ರಿಂದ 9-30ರ ವರೆಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸಿಂಗ್ ಮಾಡಲಾಯಿತು. ಉಳಿದಂತೆ ವಾಣಿ, ಸೇಕ್ರೆಡ್ ಹಾರ್ಟ್, ಜ್ಯೂನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಬೆಳಗ್ಗೆ 8 ಗಂಟೆಯಿಂದಲೇ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸಿಂಗ್ ಮಾಡಿ ಕೊಠಡಿಯೊಳಗೆ ಬಿಡಲಾಗಿತ್ತು.
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಮಾಸ್ಕ್‌ಗಳನ್ನು ಹಾಕಿಕೊಂಡು ಬಂದಿದ್ದರು. ಕೆಲವು ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಗಿದೆ.
ಉಜಿರೆ ಎಸ್‌ಡಿಎಂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 952 ಮಂದಿ ವಿದ್ಯಾರ್ಥಿಗಳಲ್ಲಿ 932 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು, 20 ಮಂದಿ ಗೈರಾಗಿದ್ದಾರೆ. ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ಕೇಂದ್ರದಲ್ಲಿ 545 ಮಂದಿ ವಿದ್ಯಾರ್ಥಿಗಳಲ್ಲಿ 525 ಮಂದಿ ಹಾಜರಾಗಿ 20 ಮಂದಿ ಗೈರಾಗಿದ್ದಾರೆ.
ಮತ್ತು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಕೇಂದ್ರದಲ್ಲಿ 582 ವಿದ್ಯಾರ್ಥಿಗಳಲ್ಲಿ 574 ಮಂದಿ ಹಾಜರಾಗಿ 8 ಮಂದಿ ಗೈರಾಗಿದ್ದಾರೆ. ಅದೇ ರೀತಿ ಬೆಳ್ತಂಗಡಿ ಜ್ಯೂನಿಯರ್ ಕಾಲೇಜಿನ ಕೇಂದ್ರದಲ್ಲಿ 601 ವಿದ್ಯಾರ್ಥಿಗಳಲ್ಲಿ 595 ವಿದ್ಯಾರ್ಥಿಗಳು ಹಾಜರಾಗಿದ್ದು 6 ಮಂದಿ ಗೈರಾಗಿದ್ದಾರೆ.