ಬೆಂಗಳೂರು: ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಜೊತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮೊದಲ ಸಭೆ ನಡೆಸುತ್ತಿದ್ದು, ಪಕ್ಷದ ಸಂಘಟನೆ ಕುರಿತು ರಾಜ್ಯ ಬಿಜೆಪಿ ಘಟಕಕ್ಕೆ ನೀಡಿರುವ ಹೊಸ ಟಾಸ್ಕ್ ನ ವಿವರಣೆ ನೀಡುತ್ತಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನೂತನ ಪದಾಧಿಕಾರಿಗಳ ಸಭೆ ನಡೆಯುತ್ತಿದೆ. ಸಂಜೆವರೆಗೂ ಇಡೀ ದಿನ ಪದಾಧಿಕಾರಿಗಳ ಜೊತೆ ಸಂತೋಷ್ ಸಭೆ ನಡೆಸಿ ಸಲಹೆ ಸೂಚನೆ ಹಾಗು ಹೈಕಮಾಂಡ್ ನೀಡಿರುವ ಟಾಸ್ಕ್ ಕುರಿತು ವಿವರಗಳನ್ನು ನೀಡಲಿದ್ದಾರೆ.
ಜುಲೈ 31ಕ್ಕೆ ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು, ಆಗಸ್ಟ್ 3 ರಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೂತನ ತಂಡದ ಜೊತೆ ಮೊದಲ ಸಭೆ ನಡೆಸಿದ್ದರು. ಅದಾದ ನಂತರ ಆಗಸ್ಟ್ 10 ರಂದು ಬಿಜೆಪಿ ಹೈಕಮಾಂಡ್ ರಾಜ್ಯ ಘಟಕಕ್ಕೆ ಹೊಸ ಟಾಸ್ಕ್ ನೀಡಿ ಸಿದ್ಧವಾಗುವ ಸಂದೇಶ ನೀಡಿತ್ತು.
ಏನಿದು ಟಾಸ್ಕ್?:
ಗೆದ್ದ ಕ್ಷೇತ್ರಗಳಲ್ಲಿ ಮೈಮರೆಯಬಾರದು, ಸೋತ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಹಾಗೂ ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸಬೇಕು. ಹೊಸ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಬೇಕು ಎನ್ನುವ ಟಾಸ್ಕ್ ನೀಡಿತ್ತು. ಈ ಕುರಿತು ಆಗಸ್ಟ್ 11 ರಂದು 'ಈಟಿವಿ ಭಾರತ' ವರದಿ ಪ್ರಕಟಿತ್ತು.
ಇದೀಗ ಹೈಕಮಾಂಡ್ ನ ಟಾಸ್ಕ್ ನ ಸಂಪೂರ್ಣ ವಿವರವನ್ನು ರಾಜ್ಯದ ಪದಾಧಿಕಾರಿಗಳಿಗೆ ಬಿ.ಎಲ್ ಸಂತೋಷ್ ನೀಡುತ್ತಿದ್ದಾರೆ. ಯಾವ ರೀತಿ ಪಕ್ಷ ಸಂಘಟನೆ ನಡೆಸಬೇಕು, ಗೆದ್ದ ಕ್ಷೇತ್ರಗಳಲ್ಲಿ ಕಾರ್ಯತಂತ್ರ ಹೇಗಿರಬೇಕು, ಸೋತ ಕ್ಷೇತ್ರಗಳಲ್ಲಿ ಹೆಣೆಯಬೇಕಿರುವ ಹೊಸ ತಂತ್ರಗಾರಿಕೆ ಹಾಗು ಹಳೆ ಮೈಸೂರು ಭಾಗದಲ್ಲಿ ಕೈಗೊಳ್ಳಬೇಕಿರುವ ಯೋಜನೆಗಳ ಕುರಿತು ವಿಸ್ತಾರವಾದ ಮಾಹಿತಿ ನೀಡುತ್ತಿದ್ದಾರೆ. ಮೂರು ಕಡೆಯೂ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡಬೇಕಿರುವ ಸವಾಲಿಗೆ ಸಿದ್ಧವಾಗುವಂತೆ ಸೂಚನೆ ನೀಡಿದ್ದಾರೆ.
2023 ರ ಚುನಾವಣೆಗೆ ಪಕ್ಷ ಈಗಿನಿಂದಲೇ ಸಿದ್ಧತೆ ನಡೆಸಬೇಕು. ಗೆದ್ದಿರುವ ಕೆಲ ಕ್ಷೇತ್ರ ಬಿಜೆಪಿ ಕೈತಪ್ಪುವ ಸಾಧ್ಯತೆ ಇದ್ದು, ಹಳೆ ಮೈಸೂರು ಭಾಗದಿಂದ ಅದನ್ನು ಭರಿಸಿಕೊಳ್ಳಬೇಕು ಎನ್ನುವ ಚಿಂತನೆಯೊಂದಿಗೆ ಬಿಜೆಪಿ ಹೈಕಮಾಂಡ್ ನೀಡಿರುವ ಟಾಸ್ಕ್ ಗೆ ರಾಜ್ಯದ ನೂತನ ಪದಾಧಿಕಾರಿಗಳು ಸಜ್ಜಾಗುವಂತೆ ಬಿ.ಎಲ್. ಸಂತೋಷ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸವಾಲು, ಸಮಸ್ಯೆ ಆಲಿಸಿದ ಸಂತೋಷ್:
ಪಕ್ಷ ಸಂಘಟನೆಗೆ ಕ್ಷೇತ್ರಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ಸವಾಲುಗಳನ್ನು ಬಿ.ಎಲ್. ಸಂತೋಷ್ ಆಲಿಸಿದರು. ಸೋತ ಕ್ಷೇತ್ರಗಳಲ್ಲಿ ಮುಖಂಡರ ನಡುವಿನ ವೈಮನಸ್ಸು, ಗೆದ್ದ ಕ್ಷೇತ್ರಗಳಲ್ಲಿ ನಾಯಕರಿಂದ ಸಿಗದ ಸಹಕಾರ, ಹಳೆ ಮೈಸೂರು ಭಾಗದಲ್ಲಿ ಕಾರ್ಯಕರ್ತರ ಪಡೆಯ ಕೊರತೆ ವಿವರಗಳನ್ನು ಆಲಿಸಿದ ಅವರು, ಪರಿಶೀಲನೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.