ಶಿವಮೊಗ್ಗ :ತುಂಗಾನದಿ ದಡದ ಮೇಲೆ ಬಾಂಬ್ ಸ್ಫೋಟ ಪ್ರಯೋಗ ನಡೆಸಿರುವ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡ ತೀರ್ಥಹಳ್ಳಿಯ ನಾಲ್ಕು ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ. ತೀರ್ಥಹಳ್ಳಿಯ ಶಾರಿಕ್ ಎಂಬಾತ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದು, ಈತನಿಗೂ ತೀರ್ಥಹಳ್ಳಿಯ ಅರಾಫತ್ ಅಲಿಗೂ ನಂಟಿದೆ ಎಂಬ ಗುಮಾನಿಯ ಮೇರೆಗೆ ವಿದೇಶದಿಂದ ದೆಹಲಿಗೆ ಬಂದವನನ್ನು ತನಿಖಾಧಿಕಾರಿಗಳು ಬಂಧಿಸಿದ್ದರು.
ಬಾಂಬ್ ಸ್ಫೋಟ ಪ್ರಯೋಗ ಹಾಗೂ ತ್ರಿವರ್ಣ ಧ್ವಜ ಸುಟ್ಟು ಹಾಕಿದ ಘಟನೆ ಸೇರಿದಂತೆ ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಅರಾಫತ್ನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ತೀರ್ಥಹಳ್ಳಿಯ ನಾಲ್ವರಿಗೆ ಅ.19 ರಂದು ಬೆಂಗಳೂರಿನ ಎನ್ಐಎ ಕಚೇರಿಗೆ ಬರುವಂತೆ ತಿಳಿಸಲಾಗಿದೆ. ಎನ್‌ಐಎ ತಂಡ ಇನ್ನಷ್ಟು ಜನರನ್ನು ವಿಚಾರಣೆಗೆ ಒಳಪಡಿಸಲು ಸಿದ್ದತೆ ನಡೆಸಿದೆ. ಈ ಹಿಂದೆ ಹರ್ಷ ಎಂಬವರ ಕೊಲೆ ಪ್ರಕರಣದಲ್ಲಿ ಶಿವಮೊಗ್ಗ ನಗರದ 20ಕ್ಕೂ ಹೆಚ್ಚು ಮಂದಿಯನ್ನು ಎನ್‌ಐಎ ವಿಚಾರಣೆಗೆ ಕರೆಸಿಕೊಂಡಿತ್ತು.
ಅರಾಫತ್ ಅಲಿ ದೆಹಲಿಯಲ್ಲಿ ಬಂಧನ: ಕರ್ನಾಟಕದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳು ನಡೆಸಿದ್ದ ಕಿಂಗ್‌ಪಿನ್ ಹಾಗು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಗೆ ಸೇರಿದ್ದ ಅರಾಫತ್ ಅಲಿ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಪೊಲೀಸರು ದೆಹಲಿಯಲ್ಲಿ (ಸೆಪ್ಟೆಂಬರ್ 14, 2023) ಬಂಧಿಸಿದ್ದರು. ಕೀನ್ಯಾದ ನೈರೋಬಿಯಿಂದ ನವದೆಹಲಿಗೆ ವಿಮಾನದಲ್ಲಿ ಆಗಮಿಸಿದಾಗ ನಿಲ್ದಾಣದಲ್ಲೇ ಸೆರೆ ಹಿಡಿಯಲಾಗಿತ್ತು.
ಅರಾಫತ್ ಅಲಿ ನೇರವಾಗಿ ಯಾವುದೇ ದಾಳಿಗಳಲ್ಲಿ ಭಾಗಿಯಾಗಿಲ್ಲ. ಆದರೆ ಆತ ವಿದೇಶದಲ್ಲಿದ್ದುಕೊಂಡು ದೇಶದಲ್ಲಿ ನಡೆಯುವ ಭಯೋತ್ಪಾದಕ ಸಂಚುಗಳಿಗೆ ಹಣಕಾಸು ನೆರವು ಒದಗಿಸುತ್ತಿದ್ದನು. ವಿದೇಶದಲ್ಲಿ ಭಾರತದ ವಿರುದ್ಧ ಪಿತೂರಿ ನಡೆಸುತ್ತಿದ್ದ ಎಂಬುದನ್ನು ಎನ್ಐಎ ಪತ್ತೆ ಮಾಡಿದೆ.