ಶಿವಮೊಗ್ಗ:ಲಂಚ ಸ್ವೀಕರಿಸಿದ್ದ ಜೋಗ-ಕಾರ್ಗಲ್ ಪಟ್ಟಣ ಪಂಚಾಯತಿ ಸದಸ್ಯನ ಸದಸ್ಯತ್ವ ರದ್ದುಗೊಳಿಸಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಆದೇಶಿಸಿದ್ದಾರೆ. ಹರೀಶ್ ಗೌಡ ತಮ್ಮ ಪಟ್ಟಣ ಪಂಚಾಯಿತಿ ಸದಸ್ಯತ್ವ ಕಳೆದುಕೊಂಡಿದ್ದಾರೆ. ಇವರು ಜೋಗ- ಕಾರ್ಗಲ್ ಪಟ್ಟಣ ಪಂಚಾಯಿತಿಯ 8ನೇ ವಾರ್ಡ್ನ ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದ್ದರು.
ಕೋಳಿ ಅಂಗಡಿಯ ಪರವಾನಗಿ ಮಾಡಿಸಿಕೊಡಲು ವ್ಯಕ್ತಿಯೊಬ್ಬರಿಂದ ಇವರು 50 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಲಂಚ ಸ್ವೀಕಾರ ಮಾಡಿದ ಬಳಿಕ ನಾನು ಟ್ರ್ಯಾಪ್ ಆಗಿದ್ದೇನೆ ಎಂದು ತಿಳಿದು ಲಂಚದ ಹಣವನ್ನು ಸುಡಲು ಸಹ ಯತ್ನಿಸಿದ್ದರು. ಇದರಲ್ಲಿ ಹಲವು ನೋಟುಗಳು ಸಹ ಸುಟ್ಟು ಹೋಗಿದ್ದವು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ 8ನೇ ವಾರ್ಡ್ನಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಅಹ್ಮದ್ ಅಬ್ದುಲ್ ಎಂಬವರಿಗೆ ಅಂಗಡಿಯ ಪರವಾನಿಗೆ ಒದಗಿಸಲು ಆರೋಪಿ ಹಣದ ಬೇಡಿಕೆ ಇಟ್ಟಿದ್ದರು. ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿತ್ತು. ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ ಭ್ರಷ್ಟಾಚಾರದಡಿ ಸಾಗರದ ಎಸಿ ಪಲ್ಲವಿ ಪಟ್ಟಣ ಪಂಚಾಯಿತಿ ಸದಸ್ಯತ್ವದಿಂದ ಹರೀಶ್ ಗೌಡರನ್ನು ವಜಾ ಮಾಡಿದ್ದಾರೆ.
ಇದನ್ನು ಓದಿ:ಬೈಕ್ ಅಪಘಾತ: ಗಾಯಾಳುವಿನ ಪ್ರಾಣ ರಕ್ಷಣೆಗೆ ದೌಡಾಯಿಸಿದ ಚಿಕ್ಕೋಡಿ ಉಪ ವಿಭಾಗಾಧಿಕಾರಿ
ಪ್ರಕರಣದ ಹಿನ್ನೆಲೆ: ಜೊಗ್ ಕಾರ್ಗಲ್ ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ನಗರದ ಅಹ್ಮದ್ ಅಬ್ದುಲ್ ಅವರ ಬಳಿ ಕೋಳಿ ಮಾಂಸದ ಅಂಗಡಿ ಪರವಾನಿಗೆ ನೀಡಲು 50 ಸಾವಿರ ರೂಪಾಯಿ ಲಂಚ ಕೇಳಿದ್ದರು. ಹೀಗಾಗಿ ಅಹ್ಮದ್ ಅಬ್ದುಲ್ ಅವರು ಲಂಚ ಕೇಳಿದ ಮಾಹಿತಿಯನ್ನು ಲೋಕಾಯುಕ್ತರಿಗೆ ತಿಳಿಸಿದ್ದರು. ಲೋಕಾಯುಕ್ತರು ಅಬ್ದುಲ್ ಕಡೆಯಿಂದ ಹಣ ಕೊಡಿಸಿ ಹರೀಶ್ನನ್ನು ಬಲೆಗೆ ಕೆಡವಿದ್ದರು. ಬಳಿಕ ಲೋಕಾಯುಕ್ತರು ಹರೀಶ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಹರೀಶ್ರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು.
ಇದನ್ನು ಓದಿ:ವಿಧಾನಸೌಧದ ಬಳಿ ಹಣ ಪತ್ತೆ: ಪೊಲೀಸರ ವಿರುದ್ಧ ಆರೋಪಿ ಜಗದೀಶ್ ಪರ ವಕೀಲ ಗರಂ
ಲೋಕಾಯುಕ್ತ ಕಾಯ್ದೆಯಂತೆ ಅನರ್ಹ ಸದಸ್ಯ ಆಗುವ ಮೊದಲು ಕರ್ನಾಟಕ ಪೌರಸಭಾ ಕಾಯ್ದೆ ಕಲಂ 41(1)ರಂತೆ ನಗರಸ್ಥಳೀಯ ಸಂಸ್ಥೆಗಳ ಸದಸ್ಯತ್ವವನ್ನು ರದ್ದಗೊಳಿಸಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಲೋಕಾಯುಕ್ತರು ಸೂಚಿಸಿದ್ದಾರೆ. ಲೋಕಾಯುಕ್ತರ ಸೂಚನೆ ಮೆರೆಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು, ಪ್ರಕರಣದ ತನಿಖೆಗೆ ಅಗತ್ಯವಿರುವ ದಾಖಲಾತಿಗಳನ್ನು ನಾಶಪಡಿಸುವ ಅಥವಾ ತಿರುಚುವ ಹಾಗೂ ಇತರ ಸಾಕ್ಷಿದಾರರಿಗೆ ತನ್ನ ಹುದ್ದೆಯ ಪ್ರಭಾವವನ್ನು ಬಳಸಿಕೊಂಡು ಬೆದರಿಕೆ ಒಡ್ಡುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲ ಆರೋಪಿಯು 48 ಗಂಟೆಗಳಿಗೂ ಹೆಚ್ಚಿನ ಅವಧಿ ನ್ಯಾಯಾಂಗ ಬಂಧನದಲ್ಲಿದ್ದುದರಿಂದ ಹರೀಶ್ರನ್ನು ಪಟ್ಟಣ ಪಂಚಾಯಿತಿ ಸದಸ್ಯತ್ವ ಸ್ಥಾನವನ್ನು ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ ಸ್ಫೋಟ ಪ್ರಕರಣ: 6 ಕಡೆ ಎನ್ಐಎ ದಾಳಿ, ಇಬ್ಬರು ಐಸಿಸ್ ಸಕ್ರಿಯ ಸದಸ್ಯರ ಬಂಧನ