ಶಿವಮೊಗ್ಗ:ಮುಜರಾಯಿ ದೇವಸ್ಥಾನಗಳ ಅಧೀನದಲ್ಲಿರುವ ದೇವಾಲಯಗಳ ಆದಾಯ ದೇವಸ್ಥಾನಗಳಿಗೆ ಮಾತ್ರ ವಿನಿಯೋಗವಾಗಬೇಕು. ಈ ಹಣ ಅನ್ಯ ಉದ್ದೇಶಗಳಿಗೆ ಬಳಕೆಯಾಗಬಾರದು. ಇದರ ಜೊತೆ ಚರ್ಚ್ ಮತ್ತು ಮಸೀದಿಗಳನ್ನು ಮುಜರಾಯಿ ಅಥವಾ ಸರ್ಕಾರದ ಅಧೀನಕ್ಕೆ ಒಳಪಡಿಸಬೇಕೆಂದು ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಹೆಚ್ ಬಿ ರಮೇಶ್ಬಾಬು ಜಾಧವ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸರ್ಕಾರ ಮುಜರಾಯಿ ದೇವಸ್ಥಾನ ಆದಾಯ ದೇವಸ್ಥಾನಗಳಿಗಷ್ಟೇ ವಿನಿಯೋಗಿಸಲಿ.. - ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ
ಮುಜರಾಯಿ ದೇವಸ್ಥಾನಗಳ ಅಧೀನದಲ್ಲಿರುವ ದೇವಾಲಯಗಳ ಆದಾಯ ದೇವಸ್ಥಾನಗಳಿಗೆ ಮಾತ್ರ ವಿನಿಯೋಗವಾಗಬೇಕು. ಈ ಹಣ ಅನ್ಯ ಉದ್ದೇಶಗಳಿಗೆ ಬಳಕೆಯಾಗಬಾರದೆಂದು ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಹೆಚ್ ಬಿ ರಮೇಶ್ಬಾಬು ಜಾಧವ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ಬಾಬು, ಮುಜರಾಯಿ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳ ಕಾಣಿಕೆ ಹುಂಡಿ ಸೇರಿದಂತೆ ಭಕ್ತಾದಿಗಳಿಂದ ನೀಡಲ್ಪಟ್ಟ ಹಣವನ್ನು ಸರ್ಕಾರ ದೇವಸ್ಥಾನಗಳ ಅಭಿವೃದ್ಧಿಗೆ ಬಳಸದೆ ಅನ್ಯ ಉದ್ದೇಶಗಳಿಗೆ ಬಳಸುತ್ತಿದೆ. ಈ ಕ್ರಮ ಮುಂದುವರಿಯಬಾರದು ಎಂದರು. ಅಷ್ಟೇ ಅಲ್ಲ, ಮಸೀದಿಗಳಲ್ಲಿ ವಕ್ಫ್ ವತಿಯಿಂದ ಮೌಲ್ವಿಗಳಿಗೆ ಉತ್ತಮ ಪ್ರಮಾಣದ ವೇತನವನ್ನು ನೀಡಲಾಗುತ್ತಿದೆ. ಆದರೆ, ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಅರ್ಚಕರಿಗೆ ಕನಿಷ್ಠ ವೇತನ ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಜೊತೆಗೆ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡಿರುವುದು ಸ್ವಾಗತಾರ್ಹ. ಹಾಗೆಯೇ ಆದಷ್ಟು ಬೇಗ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಹಾಗೂ ಗೋಹತ್ಯೆ ನಿಷೇಧವನ್ನು ಕಾಯ್ದೆಯಾಗಿ ಮಾಡಬೇಕು ಎಂದು ಒತ್ತಾಯಿಸಿದರು.