ಶಿವಮೊಗ್ಗ : ರಕ್ಷಾ ಬಂಧನದ ಉಡುಗೊರೆಯಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. "ರಕ್ಷಾ ಬಂಧನದ ದಿನದಂದು ಮನೆಯ ಯಜಮಾನಿಗೆ ಅಣ್ಣನ ರೀತಿಯಲ್ಲಿ ಒಂದು ಬಹುಮಾನ ಕೊಡಲಾಗಿದೆ" ಎಂದರು.
"ಚುನಾವಣೆಗೂ ಮುನ್ನ ನಿಮಗೆ ನೀಡಿದ ಆಶ್ವಾಸನೆಯಂತೆ ಈಗ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ದೇವೆ. ಶಕ್ತಿ ಯೋಜನೆ ಈಗಾಗಲೇ ಜಾರಿಯಾಗಿದೆ. ಇದರಿಂದ ನೀವು ಗಂಡಸರ ರೀತಿ ಊರೂರು ಸುತ್ತಬಹುದು. ಹಸಿದವರ ಹೊಟ್ಟೆಗೆ ಊಟ ನೀಡಬೇಕೆಂದು ಅಕ್ಕಿ ನೀಡಲಾಗುತ್ತಿದೆ. 5 ಕೆ.ಜಿ ಅಕ್ಕಿ ನೀಡಲಾಗದೇ ಹೋಗಿದ್ದಕ್ಕೆ ನಿಮ್ಮ ಖಾತೆಗೆ ಹಣ ಹಾಕಲಾಗುತ್ತಿದೆ. ಗೃಹಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ. ಅದರಂತೆ ಲಕ್ಷಾಂತರ ಮನೆಗಳಿಗೆ ಶೂನ್ಯ ಬಿಲ್ ಬಂದಿದೆ" ಎಂದು ಹೇಳಿದರು.
"ಸರ್ಕಾರ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಗ್ಯಾಸ್ ಸಿಲಿಂಡರ್ ದರ ಏರಿಕೆಯಾದ ಕಾರಣಕ್ಕೆ ಗ್ರಾಮೀಣ ಭಾಗದ ಜನರು ಕಟ್ಟಿಗೆ ಕಡೆ ಹೋಗಿದ್ದಾರೆ. ಕಾಡಿಗೆ ಹೋದ್ರೆ ಅರಣ್ಯ ಇಲಾಖೆಯವರು ಬಿಡಲ್ಲ. ಈಗ 2 ಸಾವಿರ ರೂ. ಹಣ ನೀಡಲಾಗುತ್ತಿದೆ. ಇದರಿಂದ ನಿಮ್ಮ ಕುಟುಂಬ ನಿರ್ವಹಣೆ ಮಾಡಬಹುದು. ಮನೆಯಲ್ಲಿ ಗೃಹಿಣಿಯರು" ಸಿಎಂ ಎಂದು ತಿಳಿಸಿದರು.
"ಸರ್ಕಾರ ಬಂದಾಗ ಟೀಕೆ, ಟಿಪ್ಪಣಿ ಮಾಡುತ್ತಾರೆ. ಅವರಿಗೆ ಉತ್ತರ ನೀಡಬೇಕೆಂದು ನುಡಿದಂತೆ ನಡೆಯುತ್ತಿದ್ದೇವೆ. ಭಾರತದಲ್ಲಿಯೇ ಅದ್ಭುತವಾದ ಕಾರ್ಯಕ್ರಮ ನಡೆಸುತ್ತಿದ್ದೇವೆ. ನಮ್ಮ ಯೋಜನೆ ಇಲ್ಲಿಗೆ ನಿಲ್ಲಲ್ಲ, ಮುಂದೆಯೂ ಇರುತ್ತದೆ ಎಂದು ಭರವಸೆ ನೀಡಿದರು. 3.60 ಲಕ್ಷ ಕುಟುಂಬದವರು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ 30 ಸಾವಿರ ಕುಟುಂಬಗಳು ಅರ್ಜಿ ಸಲ್ಲಿಕೆ ಮಾಡುವಂತೆ ತಿಳಿಸಬೇಕು" ಎಂದು ಸಚಿವರು ಹೇಳಿದರು.