ಶಿವಮೊಗ್ಗ:ವರುಣದಲ್ಲಿ ಮತ ಪ್ರಚಾರ ಚೆನ್ನಾಗಿ ಆಗಿದೆ. ನನಗೆ ವರುಣದಲ್ಲಿ ಯಾರು ಸ್ಪರ್ಧೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ಸೋಮಣ್ಣ ಹಾಗೂ ಪ್ರತಾಪ‌್ ಸಿಂಹ ಅವರ ಬಗ್ಗೆ ಗೌರವವಿದೆ. ನನಗೆ ಯಾರೂ ವೈರಿಗಳಿಲ್ಲ. ಎಲ್ಲರೂ ನನ್ನ ಸ್ನೇಹಿತರೇ. ನನಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ಗೂತ್ತಿದೆ. ನನಗೀಗ 61 ವರ್ಷ ಎಂದು ಸೂಚ್ಯವಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ನಟ ಶಿವರಾಜ್ ಕುಮಾರ್ ಉತ್ತರಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ವರುಣದಲ್ಲಿ ನಾನು ನಿನ್ನೆ ಪ್ರಚಾರಕ್ಕೆ ಹೋಗಿದ್ದೆ. ಅಲ್ಲಿ ಪ್ರಚಾರ ಚೆನ್ನಾಗಿತ್ತು. ಆದರೆ ನನಗೆ ಸೋಮಣ್ಣ ಅಲ್ಲಿ ಸ್ಪರ್ಧೆ ಮಾಡಿದ್ದಾರೆ ಅಂತಾ ಗೊತ್ತಿರಲಿಲ್ಲ ಎಂದರು.
ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಅನೇಕ ಕೆಲಸ ಮಾಡಿದ್ದಾರೆ. ರಾಯಚೂರಿನಲ್ಲಿ ಒಬ್ಬರು ಸಾದಿಕ್ ಅಂತಾ ಇದ್ದಾರೆ. ಅವರು ಅಪ್ಪು ಬದುಕಿದ್ದಾಗ ಅನೇಕ ಸೇವೆ ಮಾಡಿದ್ದರು. ಅಪ್ಪು ತೀರಿ ಹೋದ ಮೇಲೂ ಹಲವು ಕೆಲಸಗಳನ್ನು ಅಪ್ಪು ಹೆಸರಿನಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅವರು ಯಾರೂ ಅಪ್ಪು ಹೆಸರಿನಲ್ಲಿ ಮಾಡಿದ ಕೆಲಸವನ್ನು ಹೇಳಿಕೊಂಡು ಓಡಾಡಲ್ಲ. ಇಂತಹವರಿಗೆ ನಾವು ಗೌರವ ಕೊಡುತ್ತೇವೆ. ಶಿವಣ್ಣನಿಗೆ ಮಾತನಾಡಲು ಆಗಲ್ಲ ಅಂತಲ್ಲ. ನಾನು ಮಾತನಾಡಲ್ಲ ಅಷ್ಟೇ. ನಾನು ಪ್ರಚಾರಕ್ಕೆ ಹೋದಂತೆ ಸುದೀಪ್ ಅವರೂ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಹಾಗಂತ ನಾಳೆ ನಾನು ಸುದೀಪ್ ಅವರನ್ನು ಮಾತನಾಡಿಸಲು ಆಗಲ್ವಾ?, ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಇಂದು ಶಿರಸಿ, ಮುಂಡುಗೋಡಿನಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.