ಕರ್ನಾಟಕ

karnataka

ETV Bharat / state

ಸೋನಿಯಾ ಪ್ರಚಾರದ ಬಗ್ಗೆ ಪ್ರಧಾನಿ ವ್ಯಂಗ್ಯ : ಕಾಂಗ್ರೆಸ್​ ಬೆದರಿದೆ ಎಂದ ಮೋದಿ

ಬೆದರಿರುವ ಕಾಂಗ್ರೆಸ್, ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದವರನ್ನು ಮತ್ತೆ ಕರೆತಂದು ಪ್ರಚಾರ ಕಾರ್ಯ ಮಾಡುತ್ತಿದೆ ಎಂದು ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

scared-congress-fielded-those-who-had-stopped-campaigning-pms-swipe-at-sonia-gandhi
ಸೋನಿಯಾ ಪ್ರಚಾರದ ಬಗ್ಗೆ ಪ್ರಧಾನಿ ವ್ಯಂಗ್ಯ : ಕಾಂಗ್ರೆಸ್​ ಬೆದರಿದೆ ಎಂದ ಮೋದಿ

By

Published : May 7, 2023, 6:14 PM IST

Updated : May 7, 2023, 6:51 PM IST

ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ

ಶಿವಮೊಗ್ಗ:ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಭರ್ಜರಿ ರೋಡ್​ ಶೋ ನಡೆಸಿದ ಬಳಿಕ ಶಿವಮೊಗ್ಗದಲ್ಲೂ ಬೃಹತ್​ ಸಮಾವೇಶದಲ್ಲಿ ಪಾಲ್ಗೊಂಡು ಬಿಜೆಪಿ ಪರ ಮತಯಾಚನೆ ಮಾಡಿದರು.

ಆಯನೂರು ಸರ್ಕಾರಿ ಕಾಲೇಜು ಹಿಂಭಾಗದ ಆವರಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕುವೆಂಪು, ಶ್ರೀಧರ ಸ್ವಾಮೀಜಿ ಹಾಗೂ ಕೋಟೆ ಆಂಜನೇಯ ಸ್ವಾಮಿಗೆ ನಮನಗಳು ಎಂದು ಭಾಷಣ ಶುರು ಮಾಡಿದರು. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪನವರ ಸಂಕಲ್ಪ ಪೂರ್ಣಗೊಳ್ಳಲಿದೆ. ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್​​ಗೆ ಈ ಚುನಾವಣೆಯಲ್ಲಿ ತಮ್ಮ ಸುಳ್ಳುಗಳು ಕೆಲಸ ಮಾಡುತ್ತಿಲ್ಲ ಎಂದು ಗೊತ್ತಾಗಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರನ್ನು ಮತ್ತೆ ಪ್ರಚಾರಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ಗೆ ತನ್ನ ಸುಳ್ಳುಗಳು ಕೆಲಸ ಮಾಡುತ್ತಿಲ್ಲ ಎಂದು ತಿಳಿದು ಹೆದರಿದ್ದಾರೆ. ಇದರಿಂದಾಗಿ ಯಾರು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರೋ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆ ತಂದು ಕಾಂಗ್ರೆಸ್​ ಮತಯಾಚನೆ ಮಾಡುತ್ತಿದೆ. ಕಾಂಗ್ರೆಸ್​ ಈಗಾಗಲೇ ತನ್ನ ಸೋಲಿನ ಹೊಣೆಯನ್ನು ಇತರರ ಮೇಲೆ ಹೊರಿಸಲು ಪ್ರಾರಂಭಿಸಿದೆ. ಅಲ್ಲದೆ ಕಾಂಗ್ರೆಸ್​ನ ಸುಳ್ಳಿನ ಬಲೂ​ಅನ್ನು ಜನರು ಒಡೆದಿದ್ದಾರೆ. ಇನ್ನು ಕಾಂಗ್ರೆಸ್​ನವರ ಸುಳ್ಳುಗಳು ಕೆಲಸ ಮಾಡಲ್ಲ ಎಂದು ಟೀಕಿಸಿದರು.

ಇಲ್ಲಿ ಅಡಿಕೆ ಆಮದು ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವ್ಯತ್ಯಾಸ ತಿಳಿಯಬೇಕಿದೆ. ನಾನು ಗುಜರಾತ್​ ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಅಡಿಕೆ ಕುರಿತು ಬೇಡಿಕೆ ತಂದಾಗ ಅದನ್ನು ಪೂರ್ಣ ಮಾಡಿದ್ದೆ. ಇಲ್ಲಿ ಅಡಿಕೆ ಬೆಳೆಗಾರರು ಹೆಚ್ಚಿದ್ದಾರೆ. ಇದರಿಂದ ವಿದೇಶದಿಂದ ಆಮದು ಮಾಡಿಕೊಂಡರೆ ನಿಮಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ನಾನು ಪ್ರಧಾನಿಯಾದಾಗ ಆಮದು ಮೇಲೆ 100 ರೂ. ತೆರಿಗೆ ಇತ್ತು. ಇದು ನಿಮಗೆ ಮಾರಕವಾಗುತ್ತದೆ ಎಂದು ತಿಳಿದು ನಾನು ಆಮದು ತೆರಿಗೆಯನ್ನು 350ಕ್ಕೆ ಏರಿಕೆ ಮಾಡಿದೆ. ಇದರಿಂದ ಈಗ ಯಾರೂ ಅಡಿಕೆಯನ್ನು ಅಮದು ಮಾಡಿಕೊಳ್ಳುವ ಧೈರ್ಯ ಮಾಡುತ್ತಿಲ್ಲ. ಬಿಜೆಪಿ ಸರ್ಕಾರವು ರೈತರಿಗಾಗಿ ಆಮದು ಕಡಿಮೆ, ರಫ್ತಿಗೆ ಹೆಚ್ಚಿನ ಒತ್ತು ನೀಡಿದೆ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಹೆಣ್ಣು‌ ಮಕ್ಕಳ‌ ಶಿಕ್ಷಣ, ಮಹಿಳೆಯರ ಸಬಲೀಕರಣಕ್ಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.‌ ನಾವು ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯವನ್ನು ಒದಗಿಸಿದ‌ ಕಾರಣ ಹೆಣ್ಣು‌ ಮಕ್ಕಳು‌ ಶಾಲೆಯತ್ತ ಮುಖ ಮಾಡಿದ್ದಾರೆ. ಇದರಿಂದ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಮೂರು ಸೇನೆಯಲ್ಲೂ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹೆಣ್ಣು ಮಕ್ಕಳಿಗೆ ಸೈನಿಕ‌ ಶಾಲೆ ತೆರೆಯಲಾಗಿದೆ ಎಂದರು.

ಯುವಕರಿಗಾಗಿ ಮುದ್ರಾ ಯೋಜನೆ ಮಾಡಿದ್ದೇವೆ. ಈ ಮೂಲಕ 20 ಕೋಟಿಗೂ ಅಧಿಕ ಹಣ ನೀಡಲಾಗಿದೆ. ಈ ಮೂಲಕ 21ನೇ ಶತಮಾನದಲ್ಲಿ ಭಾರತವು ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರು. ಸಮಾವೇಶದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅವರಿಗೆ ಕೇಸರಿ ಶಾಲು ಹೊದಿಸಿ, ಹನುಮಾನ್ ವಿಗ್ರಹ ಮತ್ತು ಕೇಸರಿ ಬಣ್ಣದ ಶಿವಾಜಿ ಪೇಟವನ್ನು ನೀಡಿ ಗೌರವಿಸಲಾಯಿತು. ಈ ವೇಳೆ ಜನರು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದರು.

ಇದಕ್ಕೂ ಮುನ್ನ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನಡೆಯುತ್ತಿದೆ. ಮೋದಿಯವರು ನನ್ನ ಹುಟ್ಟು ಹಬ್ಬದ ದಿನದಂದು ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ನಾನು ರಾಜ್ಯದ ಪ್ರವಾಸ ಮಾಡಿದಾಗ ಜನರ ನಾಡಿ ಮಿಡಿತ ನನಗೆ ಗೊತ್ತಾಗಿದೆ. ಬಿಜೆಪಿಯು 135 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡುತ್ತದೆ ಎಂದರು. ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು, ಶೃಂಗೇರಿಯ ಜೀವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಡೆದ ತಮ್ಮ ರೋಡ್‌ ಶೋಗೆ ದೊರಕಿದ ಅಭೂತಪೂರ್ವ ಸ್ಪಂದನೆಯಿಂದ ತುಂಬಾ ಖುಷಿಯಾಗಿದೆ. ಇಂದು ಬೆಂಗಳೂರಿನಲ್ಲಿ ಸುದೀರ್ಘ ರೋಡ್‌ಶೋ ಆಗಬೇಕಿತ್ತು. ಆದರೆ ನೀಟ್ ಪರೀಕ್ಷೆಯ ಕಾರಣ ರೋಡ್​ ಶೋವನ್ನು ಕಡಿತಗೊಳಿಸಲಾಯಿತು. ನಮ್ಮ ಪರೀಕ್ಷೆ (ಚುನಾವಣೆ) ಮೇ 10 ರಂದು ನಡೆಯಲಿದೆ. ನೀಟ್​ ಪರೀಕ್ಷೆ ಮುಖ್ಯ ಎಂದು ಹೇಳಿ ನಮ್ಮ ರೋಡ್​ ಶೋವನ್ನು ಬೇಗ ಮುಗಿಸಿದೆವು ಎಂದು ಮೋದಿ ಹೇಳಿದರು.

ಭಾನುವಾರವಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅಲ್ಲಿನ ಜನರ ನಂಬಿಕೆ ಮತ್ತು ಪ್ರೀತಿ ನನ್ನ ಹೃದಯವನ್ನು ಮುಟ್ಟಿದೆ. ನಾನು ಕರ್ನಾಟಕಕ್ಕೆ ಋಣಿಯಾಗಿರುತ್ತೇನೆ ಹೇಳಿದರು. ಜನರು ನಮ್ಮ ಮೇಲೆ ತೋರಿದ ಪ್ರೀತಿ ಮತ್ತು ಆಶೀರ್ವಾದವನ್ನು ಕರ್ನಾಟಕದ ಅಭಿವೃದ್ಧಿ ಮಾಡುವ ಮೂಲಕ ಮತ್ತು ನಿಮ್ಮ ಪ್ರೀತಿಯನ್ನು ಬಡ್ಡಿಯೊಂದಿಗೆ ಹಿಂದಿರುಗಿಸುತ್ತೇನೆ ಎಂದು ಮೋದಿ ಭರವಸೆ ನೀಡಿದರು.

ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳೆದ 2019ರ ಲೋಕಸಭಾ ಚುನಾವಣೆ ನಂತರ ಆರೋಗ್ಯ ಕಾರಣಗಳಿಂದ ಚುನಾವಣಾ ಪ್ರಚಾರ, ರೋಡ್​ ಶೋ, ಸಮಾವೇಶ ಮುಂತಾದವುಗಳಿಂದ ದೂರ ಉಳಿದಿದ್ದರು. ಇದೀಗ ಕರ್ನಾಟಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ನಿನ್ನೆ (ಶನಿವಾರ) ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್​ ಪರ ಪ್ರಚಾರ ನಡೆಸಿದ್ದರು.

ಇದನ್ನೂ ಓದಿ :ಬೆಳಗಾವಿ ದಕ್ಷಿಣದಲ್ಲಿ ಅಮಿತ್ ಶಾ ಮತಬೇಟೆ: ಅಭಯ ಪಾಟೀಲ ಪರ ಭರ್ಜರಿ ರೋಡ್ ಶೋ

Last Updated : May 7, 2023, 6:51 PM IST

ABOUT THE AUTHOR

...view details