ಶಿವಮೊಗ್ಗ:ಜಿಲ್ಲೆಯ ಪ್ರಮುಖ ಆಕರ್ಷಣೀಯ ಸ್ಥಳ ಎಂದರೆ ಅದು ಸಕ್ರೇಬೈಲಿನ ಆನೆ ಬಿಡಾರ. ಶಿವಮೊಗ್ಗ ಪ್ರವಾಸ ಬಂದವರು ಈ ಸ್ಥಳ ನೋಡದೇ ಇರಲಾರರು. ಆದರೆ ಆನೆ ಬಿಡಾರದ ಮಾವುತರು ಹಾಗೂ ಕಾವಾಡಿಗಳ ಗೋಳು ಯಾರಿಗೂ ಕಾಣದ್ದಾಗಿದೆ.
ಆನೆಯನ್ನು ನೋಡಿಕೊಳ್ಳುವುದು ಎಂದರೆ ತಮ್ಮ ಪ್ರಾಣಪಣಕ್ಕಿಟ್ಟಂತೆ. ಇಂತಹ ಅಪಾಯಕಾರಿ ಕೆಲಸ ಮಾಡುವ ಮಾವುತರು ಹಾಗೂ ಕಾವಾಡಿಗರಿಗೆ ಸರ್ಕಾರ ಸರಿಯಾಗಿ ವೇತನ ನೀಡುತ್ತಿಲ್ಲವಂತೆ. ಕಳೆದ 6 ತಿಂಗಳಿನಿಂದ ವೇತನವೇ ಆಗಿಲ್ಲ. ಹೀಗಾಗಿ ಇವರೆಲ್ಲರೂ ಇದೀಗ ಜೀವನ ನಡೆಸಲು ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಕ್ರೇಬೈಲ್ ಆನೆಬಿಡಾರದ ಮಾವುತರು, ಕಾವಾಡಿಗರಿಗಿಲ್ಲ ವೇತನ ಸಕ್ರೇಬೈಲು ರಾಜ್ಯದಲ್ಲಿರೋ 4 ಆನೆ ಸಾಕಾಣಿಕೆ ಹಾಗೂ ತರಬೇತಿ ಕೇಂದ್ರಗಳಲ್ಲಿ ಒಂದು. ಪುಂಡಾಟ ಮಾಡುವ ಹಾಗೂ ರೈತರ ಬೆಳೆ ನಾಶ ಮಾಡುವ ಆನೆಗಳನ್ನು ಹಿಡಿದು ತಂದು ಅವನ್ನು ಪಳಗಿಸುವ ಕೇಂದ್ರವಾಗಿರೋ ಈ ಕೇಂದ್ರಕ್ಕೆ ಬಹುದೊಡ್ಡ ಇತಿಹಾಸ ಇದೆ. ಮಂಗಳೂರು - ತುಮಕೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರೋ ಈ ಕೇಂದ್ರ ಪುಂಡಾನೆಗಳನ್ನು ಪಳಗಿಸುವುದಷ್ಟೇ ಅಲ್ಲ ಅವುಗಳ ಸಾಕಣೆಗೂ ಹೆಸರುವಾಸಿಯಾಗಿದ್ದು, ಪ್ರಸ್ತುತ 22 ಆನೆಗಳು ಇಲ್ಲಿವೆ.
ಪುಂಡಾನೆಗಳ ಪಳಗಿಸುವ ಮಾವುತರು
ಆನೆಗಳ ಆರೈಕೆಗೆ ಎಂದೇ ನುರಿತ ಕಾವಾಡಿ ಹಾಗೂ ಮಾವುತರು ಇಲ್ಲಿದ್ದಾರೆ. ಮೂಲತಃ ಬಾಂಗ್ಲಾದೇಶವರಾದ ಇವರನ್ನು ಮೈಸೂರು ಮಹಾರಾಜರು ಆನೆ ಸಾಕಾಣಿಕೆಗೆಂದೇ ಕರೆತಂದ ಬಳಿಕ ಇಲ್ಲೇ ನೆಲೆನಿಂತ ಇವರು, ಇದೀಗ ಮೂರನೇ ತಲೆಮಾರು ಆನೆ ತರಬೇತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುಂಡಾಟ ಮಾಡುವ, ಮಾತು ಕೇಳದ ಆನೆಗಳನ್ನು ಪಳಗಿಸುವ ಕಾವಾಡಿ ಹಾಗೂ ಮಾವುತರ ಕೆಲಸ ಸದಾ ಜೀವಭೀತಿಯಲ್ಲೇ ದಿನಕಳೆದಂತೆ.
ಆದರೆ, ಸಕ್ರೇಬೈಲು ಆನೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಕಾವಾಡಿ ಹಾಗೂ ಮಾವುತರ ಬದುಕು ಸಂಕಷ್ಟದಲ್ಲಿದೆ. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನಮ್ಮ ಗೋಳು ಕೇಳುವವರಿಲ್ಲ. ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಾವಾಡಿ ಹಾಗೂ ಮಾವುತರು ಸಂಕಷ್ಟ ಹೇಳಿಕೊಂಡಿದ್ದಾರೆ.
ಲಾಕ್ಡೌನ್ ಕಾರಣ ತರಬೇತಿ ಕೇಂದ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಟಿಕೆಟ್ ರೂಪದಲ್ಲಿ ಕೇಂದ್ರಕ್ಕೆ ಬರುತ್ತಿದ್ದ ಆದಾಯವೂ ಕುಸಿದಿದೆ. ಹೀಗಾಗಿ ನೌಕರರಿಗೆ ಸಂಬಳ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ. ಇದನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಓದಿ:ಧಾರವಾಡ ಕಾರಾಗೃಹ: ಕೈದಿಗಳ ಜೊತೆ ಸಂಬಂಧಿಕರು ಮಾತನಾಡಲು ದಕ್ಷಿಣ ಕೊರಿಯಾ ಮಾದರಿ ವ್ಯವಸ್ಥೆ