ಶಿವಮೊಗ್ಗ:ಮಲೆನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಕರ್ನಾಟಕ ಸಂಘ ಕಳೆದ 94 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಸಂಘದ ನಿರಂತರ ಕನ್ನಡ ಸೇವಾ ಚಟುವಟಿಕೆಗಳನ್ನು ಗುರುತಿಸಿ ಈ ಬಾರಿ ರಾಜ್ಯ ಸರ್ಕಾರವು ಸಂಘ-ಸಂಸ್ಥೆಗಳಿಗೆ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸಂಘಕ್ಕೆ ಪ್ರಶಸ್ತಿ ನೀಡುವ ಮೂಲಕ ರಾಜ್ಯ ಸರ್ಕಾರ ಕನ್ನಡವನ್ನು ಉಳಿಸಿ ಬೆಳೆಸಲು ಪ್ರೋತ್ಸಾಹ ನೀಡಿದಂತಾಗಿದೆ.
ಕರ್ನಾಟಕ ಸಂಘದ ಸ್ಥಾಪನೆ, ಸೇವೆ:ಕರ್ನಾಟಕ ಸಂಘವು ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಲ್ಲಿ 1930ರಲ್ಲಿ ಸ್ಥಾಪಿಸಲಾಯಿತು. ಇದು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಿಸರವನ್ನು ವ್ಯವಸ್ಥಿತವಾಗಿ ರೂಪಿಸಿ ಬೆಳೆದಿರುವ ಮೊಟ್ಟ ಮೊದಲ ಸಂಸ್ಥೆ. ಕರ್ನಾಟಕ ಸಂಘವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹಾಗೂ ದ.ರಾ.ಬೇಂದ್ರೆ ಅವರ ಸಲಹೆ, ಸೂಚನೆಗಳ ಮೇರೆಗೆ 8-11-1932ರಲ್ಲಿ ಪ್ರಾರಂಭವಾಯಿತು. ಆನಂದ್, ಎಸ್.ವಿ.ಕೃಷ್ಣಮೂರ್ತಿರಾವ್, ಗುರುರಾಜ್ ದೇಶಪಾಂಡೆ, ಭೂಪಾಳಂ ಚಂದ್ರಶೇಖರಯ್ಯ, ಭೂಪಾಳಂ ಪುಟ್ಡನಂಜಪ್ಪ, ದೇವಂಗಿ ಮಾನಪ್ಪರವರಿಂದ ಸಂಘ ಪ್ರಾರಂಭವಾಯಿತು. ಈ ಸಂಘವನ್ನು ರಾಷ್ಟ್ರಕವಿ ಕುವೆಂಪು ಉದ್ಘಾಟಿಸಿರುವುದು ಇದರ ಇನ್ನೊಂದು ಹೆಮ್ಮೆ.
ಸಂಘವು 1932ರಲ್ಲಿ ನೋಂದಣಿಯಾಯಿತು. ಮೊದಲು ನಗರಸಭೆ ಆವರಣದ ಸಣ್ಣ ರೂಂನಲ್ಲಿ ಚಟುವಟಿಕೆಗಳು ನಡೆಯುತ್ತಿತ್ತು. ನಂತರ ಬಿ.ಹೆಚ್ ರಸ್ತೆಯ ಕೃಷ್ಣಕೆಫೆಯ ಮೇಲ್ಭಾಗದ ರೂಂನಲ್ಲಿ ನಡೆಯುತ್ತಿತ್ತು. ಇದಾದ ನಂತರ ಹಾಲಿ ಜಾಗವನ್ನು ಶಿವಮೊಗ್ಗ ನಗರಸಭೆ ನೀಡಿತು. ಈ ಜಾಗವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಂಘದ ಸದಸ್ಯ ಹಸೂಡಿ ವೆಂಕಟಶಾಸ್ತ್ರಿಗಳು 30 ಸಾವಿರ ರೂ. ನೀಡಿ ಹಾಲಿ ಕಟ್ಟಡ ನಿರ್ಮಿಸಿಕೊಟ್ಟರು. 1942ರಲ್ಲಿ ಬಿ.ಎಂ.ಶ್ರೀ ಅವರು ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದರು. 1943ರಲ್ಲಿ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದರು. ಕಟ್ಟಡ ನಿರ್ಮಿಸಿ ಕೊಟ್ಟಿದ್ದರಿಂದ ದ.ರಾ.ಬೇಂದ್ರೆ ಸೂಚನೆಯ ಮೇರೆಗೆ ಕಟ್ಟಡಕ್ಕೆ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನ ಎಂದು ನಾಮಕರಣ ಮಾಡಲಾಯಿತು.
ಅಂದಿನಿಂದ ಇಂದಿನವರೆಗೂ ಕರ್ನಾಟಕ ಸಂಘವು ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಕರ್ನಾಟಕ ಸಂಘದಲ್ಲಿ ರಾಜ್ಯದ ಪ್ರಸಿದ್ದ ಕವಿಗಳು ಸಾಹಿತಿಗಳು ಆಗಮಿಸಿ ತಮ್ಮ ಅನುಭವವನ್ನು ನಾಡಿಗೆ ಧಾರೆ ಎರೆದಿದ್ದಾರೆ. ಕರ್ನಾಟಕ ಸಂಘವು ಕುವೆಂಪು ಅವರ 'ನವಿಲು' ಕವನ ಸಂಕಲನ ಪ್ರಕಟಿಸಿದ್ದರು. ಕರ್ನಾಟಕ ಸಂಘವು ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಾ ಬಂದಿದೆ.
ಕರ್ನಾಟಕ ಉತ್ತಮ ಪುಸ್ತಕಗಳಿಗೆ ಬಹುಮಾನ ನೀಡುತ್ತದೆ. ಗೌರವ ಸದಸ್ಯರ ಹೆಸರಿನಲ್ಲಿ ಪ್ರತಿ ವರ್ಷ ಜನವರಿ 1 ರಿಂದ ಡಿಸೆಂಬರ್ 31ರೊಳಗೆ 12 ಪ್ರಕಾರಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಕಟವಾಗುವ ಕನ್ನಡದ ಅತ್ಯುತ್ತಮ ಪುಸ್ತಕಗಳಿಗೆ 10 ಸಾವಿರ ರೂ. ನಗದು ಪುರಸ್ಕಾರ ಹಾಗೂ ಸ್ಮರಣಿಕೆ ನೀಡುತ್ತಿದೆ.
ಪ್ರಶಸ್ತಿಗಳ ವಿವರ: ಶ್ರೇಷ್ಢ ಕಾದಂಬರಿಗಾಗಿ 'ಕುವೆಂಪು' ಬಹುಮಾನ, ಸಣ್ಣ ಕಥೆಗಾಗಿ ಡಾ.ಯು.ಆರ್.ಅನಂತಮೂರ್ತಿ ಬಹುಮಾನ, ಅನುವಾದಿತ ಕೃತಿಗಾಗಿ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಬಹುಮಾನ, ನಾಟಕಕ್ಕಾಗಿ ಡಾ.ಕೆ.ವಿ.ಸುಬ್ಬಣ್ಣ ಬಹುಮಾನ, ಮಹಿಳಾ ಲೇಖಕರಿಗಾಗಿ ಶ್ರೀಮತಿ ಇಂದಿರಾ ಬಹುಮಾನ, ಪ್ರವಾಸ ಸಾಹಿತ್ಯಕ್ಕಾಗಿ ಕುಕ್ಕೆ ಸುಬ್ರಮಣ್ಯ ಶಾಸ್ತ್ರಿ ಬಹುಮಾನ, ಮುಸ್ಲಿಂ ಲೇಖಕರಿಗಾಗಿ ಪಿ.ಲಂಕೇಶ್, ವಿಜ್ಞಾನ ಸಾಹಿತ್ಯಕ್ಕಾಗಿ ಹಸೂಡಿ ವೆಂಕಟಶಾಸ್ತ್ರಿ ಬಹುಮಾನ, ಕಾವ್ಯಕ್ಕಾಗಿ ಡಾ.ಜಿ.ಎಸ್ ಶಿವರುದ್ರಪ್ಪ ಬಹುಮಾನ, ಮಕ್ಕಳ ಸಾಹಿತ್ಯಕ್ಕಾಗಿ ಡಾ.ನಾ.ಡಿಸೋಜ ಬಹುಮಾನ, ಅಂಕಣ ಬರಹಕ್ಕಾಗಿ ಡಾ.ಹ.ಮಾ.ನಾಯಕ ಬಹುಮಾನ, ವೈದ್ಯ ಸಾಹಿತ್ಯಕ್ಕಾಗಿ ಡಾ.ಎಚ್.ಡಿ.ಚಂದ್ರಪ್ಪ ಗೌಡ ಬಹುಮಾನ ನೀಡಲಾಗುತ್ತಿದೆ. ಇದುವರೆಗೂ 209 ಬಹುಮಾನ ನೀಡಲಾಗಿದೆ.
ನಾಡುನುಡಿಗೆ ಸೇವೆ ಸಲ್ಲಿಸಿದವರಿಗೆ ಜೀವಮಾನ ಸಾಧನೆಗಾಗಿ ಡಾ.ಸಂಬಾ ಜೋಶಿ ಸಂಶೋಧನಾ ಪ್ರಶಸ್ತಿ, ಡಾ.ದ.ರಾ.ಬೇಂದ್ರೆ ಪ್ರಶಸ್ತಿ, ಡಾ.ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವಸ್ತು ವಿಜ್ಞಾನ ಪ್ರಶಸ್ತಿ, ತೀ.ನಂ ಶ್ರೀ ವಿಮರ್ಶೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.