ಕರ್ನಾಟಕ

karnataka

ETV Bharat / state

ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ರೈಲು ತಡೆಗೆ ಯತ್ನ: ಶಿವಮೊಗ್ಗದಲ್ಲಿ ಎನ್ಎಸ್​ಯುಐ ಕಾರ್ಯಕರ್ತರಿಂದ ಪ್ರತಿಭಟನೆ - Rahul Gandhi disqualified

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಎನ್​ಎಸ್​ಯುಐ ಕಾರ್ಯಕರ್ತರ ಪ್ರತಿಭಟನೆ.

NSUI workers protest in Shimoga
ಶಿವಮೊಗ್ಗದಲ್ಲಿ ಎನ್​ಎಸ್​ಯುಐ ಕಾರ್ಯಕರ್ತರು ಪ್ರತಿಭಟನೆ

By

Published : Mar 28, 2023, 9:04 PM IST

ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ವಿರೋಧಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ರೈಲ್ವೆ ನಿಲ್ದಾಣದ ಎದುರು ರೈಲು ತಡೆ ನಡೆಸಿ, ಪ್ರತಿಭಟಿಸಿದರು. ಪ್ರತಿಭಟನಾನಿರತ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ ಆದೇಶದ ಪ್ರತಿ ಕೈಗೆ ಸಿಗುವ ಮೊದಲೇ ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.

ಸಂವಿಧಾನ ವಿರೋಧಿ ನೀತಿ ಎಂದು ಆಕ್ರೋಶ: ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಾ ದ್ವೇಷದ ರಾಜಕಾರಣ ಮಾಡುತ್ತಿದೆ. ಆ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕ ತಂದೊಡ್ಡುತ್ತಿದೆ ಎಂದು ಎನ್ಎಸ್​​​ಯುಐ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

ರಾಜಕೀಯವಾಗಿ ಮುಗಿಸುವ ಸಂಚು ಎಂದು ಆರೋಪ: ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮುಂದಿನ ಪ್ರಧಾನಿ ಅಭ್ಯರ್ಥಿ ಆಗಿದ್ದಾರೆ. ಅವರನ್ನು ರಾಜಕೀಯವಾಗಿ ಮುಗಿಸುವ ಸಂಚಿನಿಂದಾಗಿ ಬಿಜೆಪಿ ಸರ್ಕಾರವು, ರಾಹುಲ್ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದಾಗಲೂ ತರಾತುರಿ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದು ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಅವರ ವಿರುದ್ಧ ರಾಹುಲ್ ಮಾತನಾಡಿದ್ದು ಒಬಿಸಿಗಳಿಗೆ ಅವಮಾನ ಎಂದು ಬಿಜೆಪಿಯವರು ಹೇಳುತ್ತಾರೆ. ನೀರವ್ ಮೋದಿ ಒಬಿಸಿಗೆ ಸೇರಿದವರೇ? ಲಲಿತ್ ಮೋದಿ, ಮೆಹುಲ್ ಚೋಕ್ಸಿ ಒಬಿಸಿಯೇ? ಅವರು ದೇಶದ ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಅಂತಹ ದೇಶಭ್ರಷ್ಟರನ್ನು ಟೀಕಿಸಿದರೆ ಬಿಜೆಪಿಗೆ ನೋವಾಗುತ್ತದೆ ಎಂದು ದೂರಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಸತ್ಯಾಗ್ರಹ

ದೇಶ ಉಳಿಸಲು ಕೆಲಸ ಮಾಡಿದವರನ್ನು ಬಿಜೆಪಿ ಶಿಕ್ಷಿಸುತ್ತದೆ. ದೇಶದ ಹಣ ಲೂಟಿ ಮಾಡಿದವರನ್ನು ವಿದೇಶಕ್ಕೆ ಕಳಿಸುತ್ತಾರೆ. ಗಾಂಧಿ ಕುಟುಂಬವೂ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪೋಷಿಸಿದೆ. ನಾವು ದೇಶದ ಪ್ರಜಾಪ್ರಭುತ್ವಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ. ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದವರು ಕಾಂಗ್ರೆಸ್‌ನ ಮಹಾನ್ ನಾಯಕರು ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಅನರ್ಹತೆ ವಾಪಸ್ಸು ಪಡೆಯಲು ಆಗ್ರಹ: ದೇಶದ ಏಕತೆಗಾಗಿ ಸಾವಿರಾರು ಕಿಲೋ ಮೀಟರ್ ನಡೆದ ಹಾಗೂ ಹುತಾತ್ಮ ಪ್ರಧಾನಿಯ ಮಗ ಯಾವತ್ತೂ ಈ ದೇಶಕ್ಕೆ ಅವಮಾನ ಮಾಡುವುದಿಲ್ಲ. ಕೂಡಲೇ ಅನರ್ಹಗೊಳಿಸಿರುವುದನ್ನು ವಾಪಸು ಪಡೆಯಬೇಕು. ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ರಾಹುಲ್ ಗಾಂಧಿ ಅವರ ಅನರ್ಹತೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಪ್ರಮುಖ ರವಿ ಕಾಟಿಕೆರೆ, ಚರಣ, ಹರ್ಷಿತ್, ವಿಜಯಕುಮಾರ್ ಎಸ್.ಎನ್., ರವಿಕುಮಾರ್, ಚಂದ್ರೋಜಿರಾವ್, ತೌಫಿಕ್, ಬಸವರಾಜ್ ಪ್ರಮೋದ್, ಸಮರ್ಥಗೌಡ, ಅಭಿಷೇಕ್, ವರುಣ್, ಕುಮಾರ್, ಉಲ್ಲಾಸ್, ಪ್ರದೀಪ್, ಸಾಗರ್, ದೀಪು, ಅನಂತ, ಅಶೋಕ್, ಯೋಗೇಶ್, ಕಾರ್ತಿಕ್, ಮಧು ನಿಖಿಲ್ ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂಓದಿ:ಎತ್ತಿನಹೊಳೆ, ನರೇಗಾ ಅವ್ಯವಹಾರ ಆರೋಪ: ಶಿವಲಿಂಗೇಗೌಡರ ವಿರುದ್ಧ 2 ದೂರು ದಾಖಲಿಸಿದ ಎನ್.ಆರ್.ರಮೇಶ್

ABOUT THE AUTHOR

...view details