ಶಿವಮೊಗ್ಗ:ರಾಣೆಬೆನ್ನೂರು ಹಾಗೂ ಬೈಂದೂರು ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ, ರಾಷ್ಟ್ರೀಯ ಹೆದ್ದಾರಿ 776 ಸಿ ಎಂದು ನಾಮಕರಣ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ. ಅರಣ್ಯ ಇಲಾಖೆ ಈ ಮಾರ್ಗದಲ್ಲಿರುವ ಕೆಲ ಮರಗಳನ್ನು ಕಟಾವು ಮಾಡಲು ಅನುಮತಿ ನೀಡಿಲ್ಲ. ಅನುಮತಿ ದೊರಕದಿದ್ದರಿಂದ ಗುತ್ತಿಗೆದಾರರು ಮರಗಳ ಬುಡಕ್ಕೆ ಡಾಂಬರೀಕರಣ ಮಾಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೈಂದೂರು – ರಾಣೆಬೆನ್ನೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೇರಿಸಿ, ಸಾಗರ ತಾಲೂಕಿನ ಆನಂದಪುರದಿಂದ ಹೊಸನಗರ ಪಟ್ಟಣದ ವರೆಗಿನ ರಸ್ತೆಯನ್ನು 218 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗೂ ರಸ್ತೆ ನಿರ್ಮಾಣ ಮಾಡಲಾಗಿದೆ. ಆನಂದಪುರ ಗ್ರಾಮದಿಂದ ಹೊಸನಗರದ ವರೆಗೆ ಸುಮಾರು 483 ಮರಗಳ ತೆರವು ಮಾಡಬೇಕಿತ್ತು. ಅರಣ್ಯ ಇಲಾಖೆಯು ಈಗ 250 ಮರಗಳ ತೆರವಿಗೆ ಅನುಮತಿ ನೀಡಿದೆ. ಉಳಿದ 233 ಮರಗಳ ತೆರವಿಗೆ ಅನುಮತಿ ನೀಡಿಲ್ಲ. ಅಲ್ಲದೇ ರಸ್ತೆ ಅಗಲೀಕರಣಕ್ಕೆ ಬೇಕಾದ ಭೂಮಿಯನ್ನು ಅರಣ್ಯ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿಲ್ಲ.
ಈ ಕಾಮಗಾರಿ 2 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಮೊದಲು ಅರಣ್ಯ ಇಲಾಖೆರವರು ಮರ ಕಡಿಯಲು ಅನುಮತಿ ನೀಡಿದ್ದರು. ಕಳೆದ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಅರಣ್ಯ ಉಳಿವಿಗಾಗಿ ಹೊಸ ಕಾಯಿದೆ ತಂದಿದ್ದು, ಇದರಲ್ಲಿ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಭೂಮಿ ನೀಡಿದರೆ ಅಷ್ಟೇ ಪ್ರಮಾಣದ ಭೂಮಿಯನ್ನು ಅರಣ್ಯ ಇಲಾಖೆಗೆ ಬೇರೆ ಕಡೆ ಮಂಜೂರು ಮಾಡಬೇಕು ಎಂಬ ನಿಯಮವಿದೆ. ಇದರಿಂದ ಮರ ತೆರವಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಎಫ್ಸಿ (ಫಾರೆಸ್ಟ್ ಕ್ಲಿಯರೆನ್ಸ್) ನೀಡಬೇಕಾಗುತ್ತದೆ. ಈ ಎಫ್ಸಿಯನ್ನು ನೀಡದ ಕಾರಣಕ್ಕೆ ಮರಗಳ ಕಟಾವಿಗೆ ಅನುಮತಿ ನೀಡಿಲ್ಲ. ಗುತ್ತಿಗೆದಾರರು ಕಾಮಗಾರಿ ಮುಗಿಸುವ ಅವಸರದಲ್ಲಿ ಮರದ ಬುಡಕ್ಕೆ ಡಾಂಬರೀಕರಣ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.