ಶಿವಮೊಗ್ಗ: ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಸರಿಯಾಗಿ ದಹಿಸದೇ ಹಾಗೆಯೇ ಬಿಟ್ಟಿದ್ದನ್ನು ಖಂಡಿಸಿ ಮಹಾನಗರ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ನಿವಾಸಿಗಳು ಶಿವಮೊಗ್ಗ- ಭದ್ರಾವತಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ನಗರದ ರಾಜೀವ್ಗಾಂಧಿ ಬಡಾವಣೆ ಪಕ್ಕದ ಮಹಾನಗರ ಪಾಲಿಕೆಯ ಚಿತಾಗಾರದಲ್ಲಿ ಮೃತದೇಹ ಸುಡಬೇಕಾದ ಪಾಲಿಕೆ ಅಧಿಕಾರಿಗಳು, ಶವಕ್ಕೆ ಬೆಂಕಿ ಹಚ್ಚಿ ಪೂರ್ಣ ಸುಡುವವರೆಗೊ ಇರದೇ ಮರಳಿದ್ದಾರೆ. ಪೂರ್ಣ ಸುಡದ ಕಾರಣ ಶವವನ್ನು ನಾಯಿಗಳು ಕಿತ್ತು ತಿನ್ನುವಾಗ ನಿವಾಸಿಗಳು ನಾಯಿಯನ್ನು ಓಡಿಸಿದ್ದಾರೆ.
ನಂತರ ಸ್ಥಳೀಯ ಕಾರ್ಪೋರೇಟರ್ ಯಮುನ ರಂಗೇಗೌಡ ಹಾಗೂ ಪಾಲಿಕೆ ಪ್ರತಿಪಕ್ಷದ ನಾಯಕ ಯೋಗೀಶ್ ಅವರು ಬಂದು ಪಾಲಿಕೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಆಗ ಶವ ಸಂಸ್ಕಾರದ ತಂಡ ಬಂದು ಬೆಳಗಿನ ಜಾವ 3 ಗಂಟೆಗೆ ಶವವನ್ನು ಪೂರ್ಣ ಸುಟ್ಟಿದೆ.
ಪ್ರತಿಭಟನೆ ನಡೆಸಿದ ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳು ಅನಾಥ ಶವವನ್ನು ಸಹ ಹೀಗೆ ಅರ್ಧ ಸುಟ್ಟ ಉದಾಹರಣೆಗಳಿಲ್ಲ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ ಎಂದು ಪಾಲಿಕೆ ಸದಸ್ಯರ ನೇತೃತ್ಚದಲ್ಲಿ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ರಸ್ತೆ ತಡೆ ನಡೆಸಿದರು. ಇದರಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಶವ ತರುವಾಗ ಮೊದಲು ನಮಗೆ ತಿಳಿಸಬೇಕು. ಸೂಕ್ತವಾಗಿ ದಹನ ನಡೆಸಬೇಕು. ಇದನ್ನು ಆಯುಕ್ತರು ಬಂದು ಹೇಳಿದ ಮೇಲೆಯೇ ತಮ್ಮ ರಸ್ತೆ ತಡೆ ವಾಪಸ್ ಪಡೆಯುವುದಾಗಿ ಪ್ರತಿಭಟನಾಕಾರರು ಪಟ್ಟುಹಿಡಿದರು.
ನಂತರ ಸ್ಥಳಕ್ಕೆ ಬಂದ ಪಾಲಿಕೆಯ ಆಯುಕ್ತ ಚಿದಾನಂದ ವಠಾರೆ, ಶವ ದಹನದ ತಂಡವನ್ನು ಬದಲಾವಣೆ ಮಾಡಲಾಗುವುದು. ಹಾಗೂ ಶವವನ್ನು ತರುವಾಗ ಪೊಲೀಸ್ ಸೈರನ್ ಹಾಕಲಾಗುವುದು. ಸೂಕ್ತ ಸ್ಯಾನಿಟೈಸರ್ ಮಾಡಿಸಲಾಗುವುದು. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.