ಶಿವಮೊಗ್ಗ :ಶರತ್ ಬಚ್ಚೇಗೌಡ ತಮ್ಮ ನಾಮಪತ್ರವನ್ನು ವಾಪಸ್ ಪಡೆದುಕೊಳ್ಳಲು ಇನ್ನೂ ಸಮಯವಿದೆ. ಒಂದು ವೇಳೆ ನಾಮಪತ್ರ ವಾಪಸ್ ಪಡೆಯದೆ ಬಂಡಾಯವಾಗಿ ಸ್ಪರ್ಧಿಸಿದರೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಈಶ್ವರಪ್ಪ ಎಚ್ಚರಿಸಿದರು.
ಶರತ್ ಬಚ್ಚೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೆ ಶಿಸ್ತು ಕ್ರಮ: ಈಶ್ವರಪ್ಪ
ಶರತ್ ಬಚ್ಚೇಗೌಡ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಗುಡುಗಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವರು, ನಾಳೆ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಅಥಣಿಗೆ ಹೋಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದೇನೆ. ಈಗಾಗಲೇ ನಮ್ಮ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಹೊಸಕೋಟೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಟಿಕೆಟ್ ಹಂಚಿಕೆ ವಿಷಯದಲ್ಲಿ ಯಾವುದೇ ಅಸಮಾಧಾನವಿಲ್ಲ'
ಲಕ್ಷ್ಮಣ ಸವದಿಯವರಿಗೆ ಇನ್ನೂ ಅಸಮಾಧಾನವಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಟಿಕೆಟ್ ವಿಷಯದಲ್ಲಿ ಸವದಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಅವರ ನೇತೃತ್ವದಲ್ಲಿಯೇ ಅಥಣಿ ಕ್ಷೇತ್ರದಲ್ಲಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ನಡೆಸುತ್ತೇವೆ. ಎಲ್ಲರೂ ಎಲ್ಲಾ ಸಭೆಗಳಿಗೂ ಹೋಗಬೇಕು ಎಂಬ ನಿಯಮವಿಲ್ಲ ಎಂದರು.