ಶಿವಮೊಗ್ಗ: ಪ್ರತಿ ಮನೆಯಲ್ಲೂ ಜ್ಯೋತಿ ಇರಬೇಕೆಂದು ಗೃಹ ಜ್ಯೋತಿ ಯೋಜನೆ ಜಾರಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗ ತಾಲೂಕಿನ ಸಂತೆಕಡೂರು ಗ್ರಾಮದಲ್ಲಿ 58 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಗೃಹ ಜ್ಯೋತಿ ಫಲಾನುಭವಿಗಳಿಗೆ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಈಗ ನಮ್ಮ ಸರ್ಕಾರ ಗೃಹ ಜ್ಯೋತಿ ನೀಡಿದಂತೆ, ನಮ್ಮ ತಂದೆ ಎಸ್ ಬಂಗಾರಪ್ಪ ಅವರು ರೈತರ ಪಂಪ್ ಸೆಟ್ಗೆ ಉಚಿತವಾಗಿ 10 ಹೆಚ್ಪಿ ಮೋಟಾರ್ಗೆ ವಿದ್ಯುತ್ ನೀಡಿದ್ದರು ಎಂದು ನೆನಪಿಸಿಕೊಂಡರು.
ನಿಮ್ಮಿಂದ ಮತವನ್ನು ಪಡೆದು ಈಗ ನಿಮಗೆ ಯೋಜನೆಗಳ ಮೂಲಕ ನಮ್ಮ ಕರ್ತವ್ಯವನ್ನು ಮಾಡುತ್ತಿದ್ದೇವೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ನಿಮಗೆ ಪ್ರಾರಂಭದಲ್ಲಿ ತೊಂದರೆಯಾಗಿರಬಹುದು. ಮುಂದೆ ಹೆಚ್ಚಿನ ಬಸ್ ಬಿಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿ ಮನೆಯಲ್ಲೂ ಜ್ಯೋತಿ ಇರಬೇಕೆಂದು ಗೃಹ ಜ್ಯೋತಿ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಯಡಿ ಕೋಟ್ಯಂತರ ಜನರು ಉಪಯೋಗ ಪಡೆಯುತ್ತಿದ್ದಾರೆ ಎಂದರು.
ಬಡವರ ಮನೆಯಲ್ಲೂ ಬೆಳಕಿರಬೇಕು ಎಂದು ಯೋಜನೆ ಜಾರಿ ಮಾಡಲಾಗಿದೆ. ಯಾರು ಉಚಿತ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವೋ ಅವರು ಬೇಗ ಅರ್ಜಿ ಹಾಕುವಂತೆ ಸಚಿವರು ಮನವಿ ಮಾಡಿದರು. ಗ್ಯಾಸ್ ಸಿಲಿಂಡರ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಇದು ತೊಂದರೆಯಾಗಿ ಪರಿಣಮಿಸಿದೆ. ಹೀಗಾಗಿ ಮನೆ ನಿಭಾಯಿಸುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ನೆರವು ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯಾದ್ಯಂತ ಓಡಾಡಬೇಕು. ಹೆಣ್ಣು ಮಕ್ಕಳ ಪಾದದ ಧೂಳಿನಿಂದ ರಾಜ್ಯ ಅಭಿವೃದ್ಧಿಯಾಗಬೇಕು ಎಂಬ ಕನಸನ್ನು ಸಿಎಂ ಸಿದ್ದರಾಮಯ್ಯ ಕಟ್ಟಿದ್ದಾರೆ ಎಂದು ಹೇಳಿದರು.